ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಹ ಹೊಸ ಪ್ರಯೋಗಗಳು ಸ್ಯಾಂಡಲ್ವುಡ್ನಲ್ಲಿ ನಡೆಯುತ್ತಿವೆ. ಇದೀಗ 'ಗೊಂಬೆಗಳ ಲವ್' ಸಿನಿಮಾ ಖ್ಯಾತಿಯ ಭಾವನಾ ಗೌಡ ಅಭಿನಯದ 'ರುದ್ರಿ' ಸಿನಿಮಾ, ರಿಲೀಸ್ಗೂ ಮುನ್ನವೇ ಕೊಲ್ಕತ್ತಾದಲ್ಲಿ ನಡೆದ, ಟ್ಯಾಗೋರ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಮೂರು ಪ್ರಶಸ್ತಿಗಳನ್ನು ಬಾಚಿಕೊಂಡಿದೆ.
ಅತ್ಯುತ್ತಮ ನಟಿ, ಅತ್ಯುತ್ತಮ ಸಿನಿಮಾ ಹಾಗು ಅತ್ಯುತ್ತಮ ನಿರ್ದೇಶನ ವಿಭಾಗದಲ್ಲಿ ರುದ್ರಿ ಸಿನಿಮಾ ಪ್ರಶಸ್ತಿಗಳನ್ನ ಪಡೆದುಕೊಂಡಿದೆ. ಕೊರೊನಾ ಮಧ್ಯೆಯೂ ನಡೆದ ಫಿಲಂ ಫೆಸ್ಟಿವಲ್ನಲ್ಲಿ, ಪಾವನಾ ಗೌಡ ಮುಖ್ಯ ಭೂಮಿಕೆಯಲ್ಲಿರೋ ಸಿನಿಮಾಕ್ಕೆ, ಮೂರು ವಿಭಾಗದಲ್ಲಿ ಪ್ರಶಸ್ತಿ ಬಂದಿರೋದು ಚಿತ್ರತಂಡಕ್ಕೆ ಖುಷಿ ನೀಡಿದೆ.
ಸಂಪೂರ್ಣ ಉತ್ತರ ಕರ್ನಾಟಕದ ಭಾಷೆ ಮತ್ತು ಅಲ್ಲಿಯೇ ಚಿತ್ರೀಕರಣಗೊಂಡಿರುವ ರುದ್ರಿ ಸಿನಿಮಾ, ಸಮಾಜದಲ್ಲಿ ನಡೆಯುವ ಗಂಭೀರ ವಿಷಯ ಒಳಗೊಂಡಿದೆ. ಯುವತಿಯೊಬ್ಬಳು ತನಗೆ ಆಗಿರುವ ಅನ್ಯಾಯದ ವಿರುದ್ಧ, ಹೇಗೆ ಪ್ರತೀಕಾರ ತೀರಿಸಿಕೊಳ್ಳುತ್ತಾಳೆ ಅನ್ನೋದು ರುದ್ರಿ ಸಿನಿಮಾದ ಕಥೆಯ ತಿರುಳು.
ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಸುಮಾರು 400ಕ್ಕೂ ವಿದೇಶಿ ಚಿತ್ರಗಳು ಪಾಲ್ಗೊಂಡಿದ್ದವು. ಅವುಗಳಲ್ಲಿ ಮೊದಲ ಪ್ರಯತ್ನವನ್ನ ಗುರುತಿಸಿ ಟ್ಯಾಗೋರ್ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನ ನೀಡಲಾಗಿದೆ. ದೇವೇಂದ್ರ ಬಡಿಗಾರ್ ನಿರ್ದೇಶನ ಮಾಡಿರುವ ಈ ಸಿನಿಮಾಕ್ಕೆ ಯುವ ನಿರ್ಮಾಪಕ ಸಿ.ಆರ್. ಮಂಜುನಾಥ್ ನಿರ್ಮಾಣವಿದೆ.
ಏಪ್ರಿಲ್ನಲ್ಲಿ ತೆರೆ ಕಾಣಬೇಕಿದ್ದ ರುದ್ರಿ ಸಿನಿಮಾ ಕೊರೊನಾದಿಂದಾಗಿ ಮುಂದಕ್ಕೆ ಹೋಗಿದೆ. ಆದರೆ ರಿಲೀಸ್ಗೂ ಮುನ್ನವೇ ಹಲವು ಪ್ರಶಸ್ತಿಗಳನ್ನ ಬಾಚಿಕೊಳ್ಳುತ್ತಿರುವ 'ರುದ್ರಿ' ಸಿನಿಮಾ ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ.