ದೇವನಹಳ್ಳಿ(ಬೆಂಗಳೂರು. ಗ್ರಾ) : ಬಹುನಿರೀಕ್ಷಿತ ಆರ್ಆರ್ಆರ್ ಚಿತ್ರ ರಿಲೀಸ್ಗೆ ದಿನಗಣನೆ ಆರಂಭಗೊಂಡಿದೆ. ಕರ್ನಾಟಕದಲ್ಲೂ ಸಿನಿಮಾ ಬಿಡುಗಡೆಯಾಗಲಿರುವ ಕಾರಣ ದೇವನಹಳ್ಳಿ ರೆಸಾರ್ಟ್ನಲ್ಲಿ ಚಿತ್ರತಂಡ ಸುದ್ದಿಗೋಷ್ಠಿ ನಡೆಸಿತು. ಈ ವೇಳೆ ಸುದ್ದಿಗಾರನೋರ್ವ ಕೇಳಿದ ಪ್ರಶ್ನೆವೊಂದಕ್ಕೆ ಉತ್ತರ ನೀಡುತ್ತಿದ್ದ ವೇಳೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಬಗ್ಗೆ ನಿರ್ದೇಶಕ ರಾಜಮೌಳಿ ಮಾತನಾಡಿದ್ದಾರೆ.
ಆರ್ಆರ್ಆರ್ ಚಿತ್ರದ ಸಾಂಗ್ವೊಂದರಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಅವರ ಪ್ರಸ್ತಾಪವಾಗಿದ್ದು, ಇದರ ಬಗ್ಗೆ ರಾಜಮೌಳಿ ಮಾತನಾಡಿದ್ದಾರೆ. ನಾನು ಹುಟ್ಟಿರುವುದು ಕರ್ನಾಟಕದಲ್ಲಿ, ವ್ಯಾಸಂಗ ಮಾಡಿದ್ದು ಆಂಧ್ರಪ್ರದೇಶದಲ್ಲಿ, ಸಿನಿಮಾ ವೃತ್ತಿ ಜೀವನ ಆರಂಭ ಮಾಡಿದ್ದು ತಮಿಳುನಾಡಿನಲ್ಲಿ. ಸದ್ಯ ವಾಸ ಮಾಡ್ತಿರುವುದು ತೆಲಂಗಾಣದಲ್ಲಿ.
ನನಗೆ ಬಾಲ್ಯದಿಂದಲೂ ದೇಶದ ಎಲ್ಲ ರಾಜ್ಯ ಸುತ್ತಾಡುತ್ತಿರುವುದರಿಂದ ನನಗೆ ಯಾವುದೇ ಒಂದು ರಾಜ್ಯದವನು ಎಂದು ಅನಿಸಿಲ್ಲ. ಭಾರತವೇ ನನ್ನ ದೇಶ. ಎಲ್ಲ ರಾಜ್ಯಗಳು ತನ್ನದೇ ಆದ ಇತಿಹಾಸ, ಸಂಸ್ಕೃತಿ ಹೊಂದಿವೆ.
ಚಿತ್ರದಲ್ಲಿ ಕರ್ನಾಟಕಕ್ಕೆ ಮಾತ್ರ ಏನಾದ್ರೂ ಮಾಡಬೇಕು, ತೆಲಂಗಾಣಕ್ಕೆ ಮಾತ್ರ ಏನಾದ್ರೂ ಮಾಡಬೇಕು ಎಂಬ ಇರಾದೆ ಇಲ್ಲ. ಪ್ರೇಕ್ಷಕರ ಆಯ್ಕೆಗೆ ಅನುಸಾರವಾಗಿ ನಾನು ಚಿತ್ರಗಳನ್ನ ಮಾಡುತ್ತೇನೆ.
ಇದನ್ನೂ ಓದಿ: 'ಪುನೀತ್ ಸರ್ ನಮ್ಮ ಹೃದಯಲ್ಲಿದ್ದಾರೆ, ಅವರು ನಮ್ಮಿಂದ ದೂರ ಹೋಗಲು ಸಾಧ್ಯವಿಲ್ಲ': ಜೂ. ಎನ್ಟಿಆರ್
ಕಿತ್ತೂರು ರಾಣಿ ಚೆನ್ನಮ್ಮ ಅವರ ಬಗ್ಗೆ ಚಿಕ್ಕವನಿಂದಾಗಿನಿಂದಲೂ ಓದಿದ್ದೇನೆ. ಅವರು ಕನ್ನಡಿಗ ಎಂಬ ಕಾರಣಕ್ಕಾಗಿ ಚಿತ್ರದಲ್ಲಿ ಬಳಕೆ ಮಾಡಿಕೊಂಡಿಲ್ಲ. ಅವರು ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿದ್ದು, ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದ್ದಾರೆ. ಹೀಗಾಗಿ, ಚಿತ್ರದಲ್ಲಿ ಬಳಕೆ ಮಾಡಿಕೊಂಡಿದ್ದೇನೆ ಎಂದರು.