ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿರುವ ನಟ ರಾಕಿಂಗ್ ಸ್ಟಾರ್ ಯಶ್ ಸದ್ಯಕ್ಕೆ ಕೆಜಿಎಫ್ ಚಾಪ್ಟರ್-2 ಸಿನಿಮಾದ ಹ್ಯಾಂಗೋವರ್ನಲ್ಲಿದ್ದಾರೆ. ಇದೀಗ ಅವರ 19ನೇ ಸಿನಿಮಾದ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದ್ದು, ಯಶ್ ಜತೆ ಸಿನಿಮಾ ಮಾಡಬೇಕೆಂದು ಸ್ಟಾರ್ ಡೈರೆಕ್ಟರ್ಗಳು ಕಾದು ಕೂತಿದ್ದಾರೆ ಎನ್ನಲಾಗಿದೆ.
ಹೌದು, ಕೆಜಿಎಫ್ ಚಾಪ್ಟರ್ 2 ದೊಡ್ಡ ಮಟ್ಟದ ಯಶಸ್ಸು ಕಂಡರೆ ಬಹುಶಃ ನಟ ಯಶ್ ಸೌತ್ ಸಿನಿಮಾ ಇಂಡಸ್ಟ್ರಿ, ಸ್ಟಾರ್ ಡೈರೆಕ್ಟರ್ ಜೊತೆಗೆ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆಯಡಿ ಸಿನಿಮಾ ಮಾಡ್ತಾರೆ ಎನ್ನಲಾಗುತ್ತಿದೆ. ಇದರ ಜೊತೆಗೆ ಕನ್ನಡದ ನಿರ್ದೇಶಕರೋರ್ವರ ಜೊತೆಗೆ ಸಹ ಸಿನಿಮಾ ಮಾಡೋದು ಪಕ್ಕಾ ಎನ್ನಲಾಗಿದೆ. ಅಷ್ಟಕ್ಕೂ ಯಾರು ಆ ನಿರ್ದೇಶಕ ಅಂತೀರಾ?, ಅವರೇ 'ಮಫ್ತಿ' ಸಿನಿಮಾ ನಿರ್ದೇಶಕ ನರ್ತನ್.
ನಟ ಯಶ್ ಅವರು ನಿರ್ದೇಶಕ ನರ್ತನ್ ಜೊತೆ 19ನೇ ಸಿನಿಮಾ ಮಾಡುವುದು ಖಚಿತ ಎಂಬ ಮಾತುಗಳು ಗಾಂಧಿನಗರದಲ್ಲಿ ಕೇಳಿ ಬರುತ್ತಿವೆ. ಈ ಮಾತಿಗೆ ಪೂರಕವಾಗಿ ನಿರ್ದೇಶಕ ನರ್ತನ್ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ ಕ್ರಿಯೇಟ್ ಮಾಡಿರುವ ವ್ಯಕ್ತಿಯೊಬ್ಬರು ಈ ಕುರಿತು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ನಲ್ಲಿ ಯಶ್ 19ನೇ ಸಿನಿಮಾದ ಕುರಿತು ನವೆಂಬರ್ 4 ರಂದು ಘೋಷಣೆ ಮಾಡುತ್ತೇವೆ. ಹೊಂಬಾಳೆ ಫಿಲಂಸ್ ಇದಕ್ಕೆ ಬಂಡವಾಳ ಹೂಡುತ್ತಿದೆ ಎಂದು ಬರೆದುಕೊಳ್ಳಲಾಗಿದೆ.
ಕೆಜಿಎಫ್ ಚಾಪ್ಟರ್ 2 ಬಿಡುಗಡೆ:
ಕೆಜಿಎಫ್ ಚಾಪ್ಟರ್ 2 ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎಂಬುದಕ್ಕೆ ಇತ್ತೀಚೆಗಷ್ಟೇ ಉತ್ತರ ಸಿಕ್ಕಿದೆ. 2022 ರ ಏಪ್ರಿಲ್ 14ರಂದು ಚಿತ್ರ ಬಿಡುಗಡೆ ಆಗಲಿದೆ ಅಂತಾ ಚಿತ್ರತಂಡ ಅಧಿಕೃತವಾಗಿ ಅನೌಂಸ್ ಮಾಡಿದೆ. ಈ ಸಿನಿಮಾ ತೆರೆ ಕಂಡ ಬಳಿಕ ಯಶ್ ಜೊತೆ ಯಾವ ನಿರ್ದೇಶಕರು ಹಾಗು ಯಾವ ನಿರ್ಮಾಣ ಸಂಸ್ಥೆಯಡಿ ಮುಂದಿನ ಸಿನಿಮಾ ಮಾಡುತ್ತಾರೆ ಎನ್ನುವುದು ಗೊತ್ತಾಗಲಿದೆ.