ವಾಷಿಂಗ್ಟನ್: ಅಮೆರಿಕದ ಖ್ಯಾತ ಚಲನಚಿತ್ರ ನಟ ಕೋಲ್ ಸ್ಪ್ರೌಸ್, ತಮ್ಮ ಹಾಗೂ ಕೆಲ ರಿವರಡೇಲ್ ಸಹ ನಟರ ವಿರುದ್ಧ ಮಾಡಲಾದ ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.
"ಈಗ ಕೆಲ ಸಮಯದ ಮುನ್ನ ನನ್ನ ಹಾಗೂ ಇನ್ನಿತರ ಮೂವರು ಸಹನಟರ ವಿರುದ್ಧ ಅನಾಮಿಕ ಟ್ವಿಟರ್ ಖಾತೆಯಿಂದ ಲೈಂಗಿಕ ದೌರ್ಜನ್ಯದ ಸುಳ್ಳು ಆರೋಪ ಮಾಡಲಾಗಿದೆ. ಈ ಆರೋಪವನ್ನು ನಾನು ಗಂಭೀರವಾಗಿ ಪರಿಗಣಿಸಿದ್ದು, ಈ ಕೃತ್ಯದ ಹಿಂದಿರುವ ಮೂಲವನ್ನು ಕಂಡುಹಿಡಿಯಲು ಸೂಕ್ತ ಮಾರ್ಗಗಳ ಮೂಲಕ ಪ್ರಯತ್ನಿಸುತ್ತಿದ್ದೇನೆ." ಎಂದು 27 ವರ್ಷದ ನಟ ಕೋಲ್ ಸ್ಪ್ರೌಸ್ ಟ್ವೀಟ್ ಮಾಡಿದ್ದಾರೆ.
"ಇಂಥ ಸುಳ್ಳು ಆರೋಪಗಳಿಂದ ನಿಜವಾದ ಸಂತ್ರಸ್ತರಿಗೆ ಭಾರಿ ಅನ್ಯಾಯವಾಗಲಿದೆ. ಅಷ್ಟಕ್ಕೂ ನಾನು ಯಾರ ಧ್ವನಿಯನ್ನೂ ಹತ್ತಿಕ್ಕುವ ಯತ್ನ ಮಾಡಿಲ್ಲ. ಆರೋಪದಲ್ಲಿರುವ ಘಟನಾ ಸರಣಿಗಳು ಸುಳ್ಳು ಎಂಬುದು ಮೇಲ್ನೋಟಕ್ಕೆ ಕಂಡು ಬರುವುದನ್ನು ಯಾರಾದರೂ ಗ್ರಹಿಸಬಹುದು. ನನ್ನ ಹಾಗೂ ನನ್ನ ಜೊತೆಗಾರ ನಟರನ್ನು ತೇಜೋವಧೆ ಮಾಡುವ ಯತ್ನಗಳ ಸರಣಿಯಲ್ಲಿ ಇದು ಮತ್ತೊಂದು ಪ್ರಕರಣವಾಗಿದೆ." ಎಂದು ಕೋಲ್ ಸ್ಪ್ರೌಸ್ ಹೇಳಿದ್ದಾರೆ.
ಕಳೆದ ಭಾನುವಾರದಂದು ತಾವೆಲ್ಲ ಜೊತೆಯಾಗಿ ಪಾರ್ಟಿ ಮಾಡಿ ಬಂದ ನಂತರ ರಾತ್ರಿ ಸ್ಪ್ರೌಸ್, ತನ್ನ ನ್ಯೂಯಾರ್ಕ್ ವಿವಿ ರೂಂನಲ್ಲಿ ನನ್ನ ಮೇಲೆ ದೌರ್ಜನ್ಯ ಎಸಗಿದ್ದರು ಎಂದು ವಿಕ್ಟೋರಿಯಾ ಎಂಬ ಮಹಿಳೆ ಆರೋಪಿಸಿದ್ದಳು.
ಮತ್ತೊಬ್ಬ ಮಹಿಳೆ ಕೂಡ ರಿವರ್ಡೇಲ್ ಸ್ಟಾರ್ ಕೆಜೆ ಆಪಾ ವಿರುದ್ಧ ಇದೇ ರೀತಿಯ ಆರೋಪದ ಟ್ವೀಟ್ ಮಾಡಿದ್ದಳು. ಆದರೆ ಈ ಟ್ವಿಟರ್ ಅಕೌಂಟ್ ಸದ್ಯಕ್ಕೆ ಸಸ್ಪೆಂಡ್ ಆಗಿದ್ದು, ಆ ಟ್ವೀಟ್ ಅನ್ನು ಡಿಲೀಟ್ ಮಾಡಲಾಗಿದೆ.