'ಹೀರೋ' ಸಿನಿಮಾ ಚಿತ್ರೀಕರಣದ ವೇಳೆ ಆಗಿದೆ ಎನ್ನಲಾದ ಬಾಂಬ್ ಸ್ಫೋಟದ ವಿಚಾರವನ್ನು ಇಷ್ಟು ದಿನಗಳ ಕಾಲ ಮುಚ್ಚಿಟ್ಟು ಚಿತ್ರ ಬಿಡುಗಡೆಗೆ ನಾಲ್ಕು ದಿನಗಳು ಇರುವಾಗ ಸುದ್ದಿ ಮಾಡಿದ್ದಕ್ಕೆ ಎಲ್ಲೆಡೆ ಟೀಕೆ ವ್ಯಕ್ತವಾಗಿತ್ತು. ಉದ್ದೇಶಪೂರ್ವಕವಾಗಿ ಈ ವಿಡಿಯೊವನ್ನು ಈಗ ರಿಲೀಸ್ ಮಾಡಲಾಗಿದೆ. ಇದೆಲ್ಲಾ ಸಿನಿಮಾ ಪ್ರಚಾರದ ಗಿಮಿಕ್ ಅಷ್ಟೇ ಎನ್ನಲಾಗಿತ್ತು. ಆದರೆ ಇದರ ಬಗ್ಗೆ ರಿಷಭ್ ಶೆಟ್ಟಿ ತಡವಾಗಿ ಪ್ರತಿಕ್ರಿಯಿಸಿದ್ದಾರೆ.
"ವಿಡಿಯೋ ರಿವೀಲ್ ಆಗಿರುವುದು ಆಕಸ್ಮಿಕ ಅಷ್ಟೇ, ಈ ವಿಚಾರ ನನ್ನ ಪತ್ನಿಗೂ ಗೊತ್ತಿಲ್ಲ. ಇದು ಖಂಡಿತ ಪ್ರಚಾರದ ಗಿಮಿಕ್ ಅಲ್ಲ" ಎಂದು ಚಿತ್ರದ ನಿರ್ಮಾಪಕ, ನಟ ರಿಷಭ್ ಶೆಟ್ಟಿ ಹೇಳಿದ್ದಾರೆ. ಜಾಹೀರಾತಿಗಾಗಿ ಚಿತ್ರದ ಕೆಲವೊಂದು ಮೇಕಿಂಗ್ ದೃಶ್ಯಗಳನ್ನು ಕೊಟ್ಟಿದ್ದೆ. ಅದರಲ್ಲಿ ಈ ಪೆಟ್ರೋಲ್ ಬಾಂಬ್ ಘಟನೆಯ ದೃಶ್ಯಗಳು ಕೂಡಾ ಇದ್ದವು. ಇದನ್ನು ನೋಡಿ ಕೆಲವರು ಸುದ್ದಿ ಮಾಡುತ್ತಿದ್ದಾರಷ್ಟೇ. ಇದನ್ನು ಪ್ರಚಾರಕ್ಕೆ ಬಳಸಿಕೊಳ್ಳಬೇಕು ಎಂಬ ಉದ್ದೇಶ ಇದ್ದಲ್ಲಿ ಇಷ್ಟು ದಿನಗಳು ಕಾಯುವ ಅವಶ್ಯಕತೆ ಇರಲಿಲ್ಲ. ಚಿತ್ರದ ಮೊದಲ ಪತ್ರಿಕಾಗೋಷ್ಠಿಯಲ್ಲಿ ಅಥವಾ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಕೂಡಾ ನಾನು ಈ ವಿಷಯವನ್ನು ಹೇಳಿರಲಿಲ್ಲ. ಈ ಘಟನೆ ಬಗ್ಗೆ ನನ್ನ ಪತ್ನಿ ಪ್ರಗತಿ ಶೆಟ್ಟಿಗೂ ಹೇಳಿಲ್ಲ" ಎನ್ನುತ್ತಾರೆ ರಿಷಭ್.
ಇದನ್ನೂ ಓದಿ: 'ಈ ಬಾರಿ ಕೊಟ್ಟಿರೋ ಗಿಫ್ಟ್ ದೊಡ್ಡದು ಅಂತಾ ನಾ ತಿಳ್ಕೊಂಡಿದ್ದೀನಿ'
ಇದೊಂದು ಚೇಸಿಂಗ್ ದೃಶ್ಯವೊಂದರ ಸಂದರ್ಭದಲ್ಲಿ ನಡೆದ ಘಟನೆಯಂತೆ. "ವಿಲನ್ ಕಡೆಯವರು ರಿಷಭ್ ಮತ್ತು ಗಾನವಿ ಅವರನ್ನು ಹಿಂಬಾಲಿಸಿಕೊಂಡು ಬರುವ ವೇಳೆ ಪೆಟ್ರೋಲ್ ಬಾಂಬ್ ಎಸೆಯುತ್ತಾರೆ. ಅಲ್ಲಿ ಒಂದು ಪುಟ್ಟ ಕಾಲುವೆ ಇದ್ದು ಅಲ್ಲಿಗೆ ಬಿದ್ದು ಏಳುವಷ್ಟರಲ್ಲಿ ಬಾಂಬ್ ಸಿಡಿಯಿತು. ನಾನು ಗಾನವಿ ಅವರ ಹಿಂದೆ ಇದ್ದರಿಂದ ಬೆಂಕಿ ನನ್ನ ಬೆನ್ನಿಗೆ ತಾಗಿ, ಶರ್ಟ್ ಸುಟ್ಟು ಹೋಯ್ತು. ನೀರಿನಲ್ಲಿ ಬಿದ್ದಿದ್ದರಿಂದ, ನಮಗೆ ಅಪಾಯ ಉಂಟಾಗಲಿಲ್ಲ. ಒಂದು ವೇಳೆ ಆ ಸ್ಥಳದಲ್ಲಿ ನೀರು ಅಥವಾ ಕೆಸರು ಇಲ್ಲದಿದ್ದರೆ ನಾನು ಸುಟ್ಟು ಹೋಗುತ್ತಿದ್ದೆ" ಎಂದು ನೆನಪಿಸಿಕೊಳ್ಳುತ್ತಾರೆ ರಿಷಭ್.'ಹೀರೋ' ಸಿನಿಮಾ ಮಾರ್ಚ್ 5 ರಂದು ರಾಜ್ಯಾದ್ಯಂತ 130ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.