ಕನ್ನಡ ಚಿತ್ರರಂಗದ ದೊಡ್ಮನೆ ನಂದಾದೀಪ ಆರಿ ಹೋಗಿ 20ದಿನಗಳು ಕಳೆಯುತ್ತಿವೆ. ಆದರೆ ಪುನೀತ್ ರಾಜ್‍ಕುಮಾರ್(Puneeth Rajkumar) ಆ ನಗು, ಆ ಸರಳತೆ ಇವತ್ತಿಗೂ ಅಭಿಮಾನಿಗಳು ಮಾತ್ರವಲ್ಲದೇ ಚಿತ್ರರಂಗದವರ ಕಣ್ಮುಂದೆ ಹಾಗೇ ಇದೆ. ಪವರ್ ಸ್ಟಾರ್ ಅಕಾಲಿಕ ಮರಣ ಇಂದಿಗೂ ನೋವುಂಟು ಮಾಡುತ್ತಿದೆ.
ಯಾವುದೇ ಸಿನಿಮಾ ಕಾರ್ಯಕ್ರಮ, ಜಿಲ್ಲೆ, ಹಳ್ಳಿಗಳು ಹಾಗು ಖಾಸಗಿ ಕಾರ್ಯಕ್ರಮಗಳಲ್ಲಿ ಪುನೀತ್ ರಾಜ್‍ಕುಮಾರ್ ನಿಧನದ ಬಗ್ಗೆ ಸ್ಮರಣೆ ಮಾಡಲಾಗುತ್ತಿದೆ. ಇದೀಗ ರಾಜ್‍ಕುಮಾರ್ ಕುಟುಂಬದವರಲ್ಲಿ ಒಬ್ಬರಾಗಿದ್ದ ಹಾಗೂ ಪುನೀತ್ ರಾಜ್‍ಕುಮಾರ್ ಸಿನಿಮಾಗಳಿಗೆ, ಕ್ಲಾಪ್ ಮಾಡುವ ಲಕ್ಕಿ ಹ್ಯಾಂಡ್ ಅಂತಾ ಕರೆಯಿಸಿಕೊಂಡಿರುವ ಕ್ರೇಜಿಸ್ಟಾರ್ ರವಿಚಂದ್ರನ್, ಅಪ್ಪು ಬಗ್ಗೆ ಎಲ್ಲೂ ಮಾತನಾಡಿರಲಿಲ್ಲ. ಆದರೆ ತಮ್ಮ ಮಗ ಮನುರಂಜನ್( Manuranjan)ಅಭಿನಯದ 'ಮುಗಿಲ್ ಪೇಟೆ'(Mugil pete cinema) ಸಿನಿಮಾ ಮಾಧ್ಯಮಗೋಷ್ಠಿಯಲ್ಲಿ, ರವಿಚಂದ್ರನ್ ಅಪ್ಪು ಸಾವಿನ ಬಗ್ಗೆ ಮಾತನಾಡುತ್ತಾ ಭಾವುಕರಾದರು.
ಅಪ್ಪು ಅವ್ರನ್ನ ಆಸ್ಪತ್ರೆಗೆ ಸೇರಿಸಲಾಗಿದೆ ಅಂತಾ ವಿಷಯ ತಿಳಿದಾಗ, ರವಿಚಂದ್ರನ್(Ravichandran) ಹೊರಗಡೆ ಇದ್ರಂತೆ. ಸಮಸ್ಯೆಗಳು ಒಂದರ ಮೇಲೆ ಒಂದು ಬರುತ್ತೆ ಅನ್ನೋ ಹಾಗೇ ಅದೇ ಸಮಯದಲ್ಲಿ ರವಿಚಂದ್ರನ್ ತಾಯಿ ಆರೋಗ್ಯದಲ್ಲಿ ಸಹ ಏರುಪೇರು ಉಂಟಾಗಿತ್ತಂತೆ. ರವಿಚಂದ್ರನ್ಗೆ ಅಪ್ಪುವಿನ ಆಸ್ಪತ್ರೆಗೆ ಸೇರಿಸಿದ್ದಾರೆ ಅಂತಾ ವಿಷಯ ತಿಳಿದಾಗ, ತಾಯಿ ಆರೋಗ್ಯ ಸರಿ ಇಲ್ಲಾ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಅಂತಾ ರವಿಚಂದ್ರನ್ ಪತ್ನಿ ಸುಮತಿ ಅವರು ರವಿಚಂದ್ರನ್ಗೆ ಫೋನ್ ಮಾಡಿದ್ದರಂತೆ. ಆಗ ರವಿಚಂದ್ರನ್ ಅವ್ರಿಗೆ ಏನು ಮಾಡಬೇಕು ಅಂತಾ ತೋಚಲಿಲ್ಲ. ಕೂಡಲೇ ರವಿಚಂದ್ರನ್ ಪತ್ನಿಗೆ ನೀನು ಅಮ್ಮನ ನೋಡಿಕೊಳ್ಳುತ್ತಿರು ಅಂತಾ, ಪುನೀತ್ ನೋಡಲು ಆಸ್ಪತ್ರೆಗೆ ಬರುವಷ್ಟರಲ್ಲಿ ಅಪ್ಪು ಎಲ್ಲರನ್ನ ಬಿಟ್ಟು ಹೋಗಿ ಬಿಟ್ಟಿದ್ದ ಅಂತಾ ರವಿಚಂದ್ರನ್ ಭಾವುಕರಾದರು.
ಪುನೀತ್ ರಾಜ್‍ಕುಮಾರ್ ಅಗಲಿ ಇಷ್ಟು ದಿನ ಆದರೂ ಮರೆಯೋದಿಕ್ಕೆ ಆಗ್ತಾ ಇಲ್ಲಾ ಅನ್ನೋದಿಕ್ಕೆ, ಅಪ್ಪುವಿನ ಆ ನಗು, ಸರಳತೆ ಹಾಗು ಮಾಡಿರೋ ಕೆಲಸಗಳು ಅಂತಾ ರವಿಚಂದ್ರನ್ ಕೊಂಡಾಡಿದರು. ಮನುಷ್ಯ ಎಷ್ಟು ಹಣ ಸಂಪಾದನೆ ಮಾಡಿದ್ದಾನೆ ಅನ್ನೋದು ಮುಖ್ಯ ಅಲ್ಲ, ಎಷ್ಟು ಜನರ ಪ್ರೀತಿ ಗಳಿಸಿದ್ದರು ಅನ್ನೋದನ್ನ ಅಪ್ಪು ತೋರಿಸಿ ಕೊಟ್ಟಿದ್ದಾನೆ ಅಂದರು. ಅಷ್ಟೇ ಅಲ್ಲ, ಅವನನ್ನು ಮರೆಯೋಕೆ ಆಗಲ್ಲ, ನಾವೆಲ್ಲ ಸತ್ತ ಮೇಲೆ ಅಷ್ಟೇ ಪುನೀತ್ ರಾಜ್‍ಕುಮಾರ್ ನೆನಪುಗಳನ್ನು ಮರೆಯೋದಿಕ್ಕೆ ಸಾಧ್ಯವಾಗುತ್ತೆ ಅಂತಾ ರವಿಚಂದ್ರನ್ ಪುನೀತ್ ಅಕಾಲಿಕ ಮರಣ ತಂದ ನೋವನ್ನು ತೋಡಿಕೊಂಡರು.