ಕೆಜಿಎಫ್ ಸಿನಿಮಾದಿಂದ ಸಂಗೀತ ನಿರ್ದೇಶಕ ರವಿ ಬಸ್ರೂರು ವಿಶ್ವ ಮಟ್ಟದಲ್ಲಿ ಗಮನ ಸೆಳೆದಿದ್ರು. ಸದ್ಯ ಕೆಜಿಎಫ್ ಚಾಪ್ಟರ್-2ನಲ್ಲಿ ಬ್ಯುಸಿಯಾಗಿರೋ ರವಿ ಬಸ್ರೂರು, ಸೈಲೆಂಟ್ ಆಗಿ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಮಕ್ಕಳನ್ನು ಸೇರಿಸಿಕೊಂಡು ಗಿರ್ಮಿಟ್ ಎಂಬ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈಗ ಅದೇ ಚಿತ್ರದ ಟೀಸರ್ ಬಿಡುಗಡೆಯಾಗಿದೆ.
ಯಾವುದೇ ಸ್ಟಾರ್ ಕಾಸ್ಟ್ ಇಲ್ಲದೆ, ಬರೀ ಮಕ್ಕಳಿಂದ ಕೂಡಿರೋ ಸಿನಿಮಾ ಇದಾಗಿದೆ. ಹಾಲಿವುಡ್ ಶೈಲಿಯಲ್ಲಿ ಈ ಸಿನಿಮಾ ಇದೆಯಂತೆ. ಸಿನಿಮಾದಲ್ಲಿ ಆಶ್ಲೇಷ್ ರಾಜ್ ಹಾಗೂ ಶ್ಲಾಘಾ ಸಾಲಿಗ್ರಾಮ ಮುಖ್ಯ ಭೂಮಿಕೆಯಲ್ಲಿ ಕಾಣಲಿದ್ದಾರೆ.
ಒಂದು ಕಮರ್ಷಿಯಲ್ ಸಿನಿಮಾಕ್ಕೆ ಬೇಕಾದ, ಫ್ಯಾಮಿಲಿ, ಆ್ಯಕ್ಷನ್, ಡ್ರಾಮಾ ಹಾಗೂ ಕಾಮಿಡಿಯಿಂದ ಕೂಡಿರುತ್ತೆ. ವಿಶೇಷ ಅಂದರೆ ಸಿನಿಮಾದಲ್ಲಿ ಅಭಿನಯಿಸಿರುವ ಮಕ್ಕಳಿಗೆ ಸ್ಟಾರ್ಗಳಾದ ಯಶ್, ರಾಧಿಕಾ ಪಂಡಿತ್, ತಾರಾ, ರಂಗಾಯಣ ರಘು, ಅಚ್ಯುತ್ ಕುಮಾರ್ ಧ್ವನಿ ನೀಡಿದ್ದಾರೆ. ಹೀರೋ ಪಾತ್ರ ಮಾಡಿರೋ ಆಶ್ಲೇಷ್ ರಾಜ್ಗೆ ಯಶ್ ಧ್ವನಿ ನೀಡಿದ್ದು, ಶ್ಲಾಘಾ ಸಾಲಿಗ್ರಾಮಗೆ ರಾಧಿಕಾ ಪಂಡಿತ್ ವಾಯ್ಸ್ ನೀಡಿದ್ದಾರೆ.
ಹಾಲಿವುಡ್ನಲ್ಲಿ ಕಾರ್ಟೂನ್ ಸಿನಿಮಾಗಳಿಗೆ, ಅಲ್ಲಿನ ಸ್ಟಾರ್ ನಟರು ಧ್ವನಿ ನೀಡುತ್ತಾರೆ. ಈಗ ಇದೇ ಶೈಲಿಯಲ್ಲಿ ಗಿರ್ಮಿಟ್ ಸಿನಿಮಾಕ್ಕೆ ಕನ್ನಡದ ಸ್ಟಾರ್ ನಟರು ವಾಯ್ಸ್ ನೀಡಿದ್ದಾರೆ. ಹಾಲಿವುಡ್ ಶೈಲಿಯ ಗಿರ್ಮಿಟ್ ಚಿತ್ರದ ಟೀಸರ್‌ನ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಲಾಂಚ್ ಮಾಡಿದ್ರು. ನಂತರ ಮಾತನಾಡಿದ ಪುನೀತ್, ಈ ಹೊಸ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ರು. ಈ ರೀತಿಯ ಎಕ್ಸ್‌ಪಿರಿಮೆಂಟ್ ಕನ್ನಡದ ಸಿನಿಮಾಗಳಲ್ಲಿ ಬರಬೇಕು. ಹಾಗೇ ಈ ಮಕ್ಕಳಿಗೆ ಒಳ್ಳೆಯದಾಗಲಿ ಅಂತಾ ಅಪ್ಪು ವಿಷ್ ಮಾಡಿದ್ರು.
ವರ್ಷಕ್ಕೆ ಒಂದು ಸಿನಿಮಾ ಮಾಡುವ ಸಂಗೀತ ನಿರ್ದೇಶಕ ರವಿ ಬಸ್ರೂರು ಇದೀಗ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. 200ಕ್ಕೂ ಹೆಚ್ಚು ಮಕ್ಕಳನ್ನು ಇಟ್ಟುಕೊಂಡು ಒಂದೇ ತಿಂಗಳಲ್ಲಿ ಈ ಗಿರ್ಮಿಟ್ ಸಿನಿಮಾ ಶೂಟಿಂಗ್ ಮಾಡಿರೋದು ವಿಶೇಷ.. ಸಚಿನ್ ಬಸ್ರೂರು ಛಾಯಾಗ್ರಹಣ, ರವಿ ಬಸ್ರೂರು ನಿರ್ದೇಶನ, ಪ್ರಮೋದ್ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಪುನೀತ್ ರಾಜ್ ಕುಮಾರ್, ನವೀನ್ ಸಜ್ಜು, ಸಂತೋಷ್ ವೆಂಕಿ, ಅರುಂಧತಿ ಕಂಠ ಸಿರಿಯಿದೆ. ಜಟ್ಟಾ ಹಾಗೂ ಕಟಕ ಅಂತಹ ವಿಭಿನ್ನ ಪ್ರಯೋಗಾತ್ಮಕ ಸಿನಿಮಾ ನಿರ್ಮಾಣ ಮಾಡಿರೋ ಎನ್.ಎಸ್.ರಾಜ್ ಕುಮಾರ್ ಈ ಸಿನಿಮಾಕ್ಕೆ ಬಂಡವಾಳ ಹಾಕಿದ್ದಾರೆ.