ಪಡ್ಡೆಹುಲಿ ಸಿನಿಮಾದಿಂದ ಸ್ಯಾಂಡಲ್ವುಡ್ನಲ್ಲಿ ಗಮನ ಸೆಳೆದಿರುವ ನಟ ಶ್ರೇಯಸ್ ನಂದ ಕಿಶೋರ್ ನಿರ್ದೇಶನದ ರಾಣ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಆರಂಭವಾಗಿದೆ.
ಗುಜ್ಜರ್ ಪುರುಷೋತ್ತಮ್ ನಿರ್ಮಾಣದ ನಂದ ಕಿಶೋರ್ ನಿರ್ದೇಶನದ ಶ್ರೇಯಸ್ ಕೆ.ಮಂಜು ಅಭಿನಯದ ರಾಣ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಇತ್ತೀಚೆಗೆ ಚಿತ್ರತಂಡ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿತ್ತು. ಈ ವೇಳೆ ಶಿವಣ್ಣ ಚಿತ್ರತಂಡಕ್ಕೆ ಶುಭ ಕೋರಿದ್ದರು.
ಇದೇ ವೇಳೆ, ನಟ ಶ್ರೇಯಸ್ಗೆ ಶಿವಣ್ಣ ಲಾಂಗ್ ಹೇಗೆ ಹಿಡಿಯಬೇಕು. ಕ್ಯಾಮೆರಾ ಮುಂದೆ ಲಾಂಗ್ ಹಿಡಿದು ಹೇಗೆ ಅಭಿನಯಿಸಬೇಕು ಎನ್ನುವುದನ್ನು ಹೇಳಿಕೊಟ್ಟು ಚಿತ್ರ ತಂಡಕ್ಕೆ ಅಚ್ಚರಿ ಮೂಡಿಸಿದರು. ಇದು ಆ್ಯಕ್ಷನ್ ಓರಿಯೆಂಟೆಡ್ ಸಿನಿಮಾ ಆಗಿದೆ.
ಇನ್ನು ಈ ಚಿತ್ರದಲ್ಲಿ ಶ್ರೇಯಸ್ಗೆ ಇಬ್ಬರು ನಾಯಕಿಯರು ಜೊತೆಯಾಗಿ ನಟಿಸುತ್ತಿದ್ದಾರೆ. ರೀಷ್ಮಾ ನಾಣಯ್ಯ ಮತ್ತು ರಜನಿ ಭಾರದ್ವಾಜ್ ಮೊದಲ ಬಾರಿ ನಂದಕಿಶೋರ್ ಮತ್ತು ಶ್ರೇಯಸ್ ಜೊತೆ ಕೆಲಸ ಮಾಡುತ್ತಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿರಲಿದ್ದು, ಮಾಸ್ ಶೈಲಿಯಲ್ಲಿ ಮೂಡಿಬರಲಿವೆಯಂತೆ. ಬೆಂಗಳೂರು ಹಾಗೂ ಉತ್ತರ ಕರ್ನಾಟಕದಲ್ಲಿ ಸಿನಿಮಾದ ಶೂಟಿಂಗ್ ಮಾಡಲಾಗುತ್ತಿದೆ. ಬಹುತೇಕ ಹೊಸಬರೆ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಬಾಡಿಬಿಲ್ಡರ್ ರಾಘವೇಂದ್ರ ಅವರನ್ನು ವಿಲನ್ ಪಾತ್ರದ ಮೂಲಕ ಪರಿಚಯ ಮಾಡಲಾಗುತ್ತಿದೆ. ಇನ್ನು ಕ್ಯಾಮೆರಾಮ್ಯಾನ್ ಶೇಖರ್ ಚಂದ್ರ ಈ ಚಿತ್ರಕ್ಕೆ ಛಾಯಾಗ್ರಹಣ, ಸಂಗೀತ ಚಂದನ್ ಶೆಟ್ಟಿ, ಕೆ.ಎಂ. ಪ್ರಕಾಶ್ ಸಂಕಲನ, ಪ್ರಶಾಂತ್ ರಾಜಪ್ಪ ಸಂಭಾಷಣೆ, ರವಿ ವರ್ಮಾ ಸಾಹಸ ನಿರ್ದೇಶನ ಮಾಡಲಿದ್ದಾರೆ.