ರಮ್ಯಕೃಷ್ಣನ್, ದಕ್ಷಿಣ ಭಾಷೆಯ ಸಿನಿಮಾಗಳೊಂದಿಗೆ ಖಳ್ನಾಯಕ್, ಕ್ರಿಮಿನಲ್, ಶಪಥ್, ಲೋಹ, ಬನಾರಸಿ ಬಾಬು, ಪರಂಪರಾ, ಬಡೇ ಮಿಯಾ ಚೋಟೆ ಮಿಯಾಗಳಂತ ಬಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸಿದ ನಟಿ.
ಆದರೆ 1988ರ 'ದಯಾವಾನ್' ಚಿತ್ರದ ನಂತರ ಮತ್ತೆ ರಮ್ಯಕೃಷ್ಣನ್ ಯಾವ ಹಿಂದಿ ಸಿನಿಮಾಗಳನ್ನು ಒಪ್ಪಿಕೊಳ್ಳಲಿಲ್ಲ. ಇದಕ್ಕೆ ಕಾರಣ ಏನು ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ರಮ್ಯಕೃಷ್ಣನ್, 'ನಿಜ ಹೇಳಬೇಕೆಂದರೆ ಉತ್ತರ ಭಾರತದಲ್ಲಿ ನನ್ನ ಸಿನಿಮಾಗಳಿಗೆ ಒಳ್ಳೆ ಪ್ರತಿಕ್ರಿಯೆ ದೊರೆಯಲಿಲ್ಲ. ಅಲ್ಲದೆ ನಂತರ ನನಗೆ ಬಂದ ಆಫರ್ಗಳು ಹೇಳಿಕೊಳ್ಳುವಂತೆ ಇರಲಿಲ್ಲ. ಆದ್ದರಿಂದ ಅಂದಿನಿಂದ ಇಂದಿನವರೆಗೂ ಹಿಂದಿ ಸಿನಿಮಾಗಳಿಂದ ದೂರವಿದ್ದೇನೆ. ಆದರೆ ದಕ್ಷಿಣದಲ್ಲಿ ನನ್ನ ಸಿನಿಮಾಗಳನ್ನು ಅಭಿಮಾನಿಗಳು ಬಹಳ ಇಷ್ಟಪಡುತ್ತಾರೆ' ಎಂದು ರಮ್ಯಕೃಷ್ಣನ್ ಹೇಳಿಕೊಂಡಿದ್ದಾರೆ.
ತೆಲುಗಿನ 'ಶೈಲಜಾ ರೆಡ್ಡಿ ಅಲ್ಲುಡು' ನಂತರ ರಮ್ಯಕೃಷ್ಣನ್ ಕನ್ನಡ, ಮಲಯಾಳಂ, ತಮಿಳು ಸಿನಿಮಾಗಳಲ್ಲಿ ಬ್ಯುಸಿ ಆದರು. ಸದ್ಯಕ್ಕೆ ಅವರು ಪೂರಿ ಜಗನ್ನಾಥ್ ನಿರ್ದೇಶನದ 'ಫೈಟರ್' ಸಿನಿಮಾದಲ್ಲಿ ನಟಿಸಬೇಕಿದೆ. ಈ ಚಿತ್ರದಲ್ಲಿ ವಿಜಯ ದೇವರಕೊಂಡ, ಅನನ್ಯಾ ಪಾಂಡೆ ನಾಯಕ, ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ತೆಲುಗಿನೊಂದಿಗೆ ಹಿಂದಿ, ತಮಿಳು ಭಾಷೆಗಳಲ್ಲೂ ಮಾಡಲಾಗುತ್ತಿದೆ.
'ಫೈಟರ್' ಚಿತ್ರದ ಬಗ್ಗೆ ಮಾತನಾಡಿದ ರಮ್ಯಕೃಷ್ಣನ್, ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ 'ಫೈಟರ್' ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈ ಚಿತ್ರದ ಮೇಲೆ ಎಲ್ಲರಿಗೂ ಬಹಳ ನಿರೀಕ್ಷೆ ಇದ್ದು ಮತ್ತೊಂದು 'ಬಾಹುಬಲಿ' ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.