ಚೆನ್ನೈ: ಹಲವು ವರ್ಷಗಳಿಂದ ಚುನಾವಣೆಗೆ ಸ್ಪರ್ಧಿಸುವ ಕುರಿತು ಮಾತನಾಡುತ್ತಿದ್ದ ತಮಿಳು ಚಿತ್ರರಂಗದ ಸೂಪರ್ಸ್ಟಾರ್ ರಜಿನಿಕಾಂತ್ ರಾಜಕೀಯ ಪ್ರವೇಶಿಸುವುದು ದೃಢವಾಗಿದೆ. ಅಲ್ಲದೇ ಡಿಸೆಂಬರ್ 31ಕ್ಕೆ ತಮ್ಮ ಹೊಸ ಪಕ್ಷ ಘೋಷಿಸುವುದಾಗಿ ಇಂದು ಹೇಳಿದ್ದಾರೆ.
ಚೆನ್ನೈನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಜನಿಕಾಂತ್, ನಾನು ನೀಡುವ ಭರವಸೆಗಳಿಂದ ಹಿಂದೆ ಸರಿಯಲ್ಲ. ರಾಜಕೀಯ ಬದಲಾವಣೆ ಅಗತ್ಯ. ಸಮಯದ ಅವಶ್ಯಕತೆ ತುಂಬಾ ಇದೆ. ಈಗ ಇದನ್ನು ಮಾಡದಿದ್ದರೆ, ಅದನ್ನು ಎಂದಿಗೂ ಮಾಡಲಾಗುವುದಿಲ್ಲ. ಇದಕ್ಕಾಗಿ, ಜನರು ನನ್ನೊಂದಿಗೆ ನಿಲ್ಲಬೇಕು ಎಂದು ನಾನು ಒತ್ತಾಯಿಸುತ್ತೇನೆ. ನಾವೆಲ್ಲ ಒಟ್ಟಾಗಿ ಸೇರಿ ಬದಲಾವಣೆ ತರೋಣ ಎಂದರು.
ನಮ್ಮ ಪಕ್ಷವು ಯಾವುದೇ ಜಾತಿ ಅಥವಾ ಧರ್ಮಕ್ಕೆ ಸೀಮಿತವಾಗದೇ 'ಅಧ್ಯಾತ್ಮಿಕ ಜಾತ್ಯತೀತ ರಾಜಕೀಯ' ನಡೆಸಲಿದೆ. ಚುನಾವಣೆಯಲ್ಲಿ ಖಂಡಿತವಾಗಿಯೂ 'ಅದ್ಭುತ' ಮತ್ತು 'ಪವಾಡ' ನಡೆಯಲಿದೆ ಎಂದು ಸೂಪರ್ಸ್ಟಾರ್ ಟ್ವೀಟ್ ಕೂಡ ಮಾಡಿದ್ದಾರೆ.
ನಾನು ಗೆದ್ದರೆ ಅದು ಜನರ ಗೆಲುವು, ನಾನು ಸೋತರೂ ಅದು ಅವರ ಸೋಲು. ತಮಿಳು ಜನರ ಹಿತದೃಷ್ಟಿಯಿಂದ ನನ್ನ ಪ್ರಾಣವನ್ನೂ ತ್ಯಾಗಮಾಡಲು ನಾನು ಸಿದ್ಧನಾಗಿದ್ದೇನೆ ಎಂದು ರಜಿನಿಕಾಂತ್ ಹೇಳಿದ್ದಾರೆ.