ಟಾಲಿವುಡ್ ಚಿತ್ರರಂಗದ ಕ್ರಿಯೇಟಿವ್ ಡೈರೆಕ್ಟರ್ ಎಸ್.ಎಸ್.ರಾಜಮೌಳಿ ನಿರ್ದೇಶನ, ರಾಮ್ ಚರಣ್ ತೇಜಾ, ಜೂನಿಯರ್ ಎನ್ಟಿಆರ್ ಮುಖ್ಯ ಭೂಮಿಕೆಯಲ್ಲಿರುವ 'ಆರ್‌ಆರ್‌ಆರ್' ಸಿನಿಮಾ ಮಾರ್ಚ್ 25ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ.
ಕರ್ನಾಟಕದಲ್ಲಿ ಕೆವಿಎನ್ ಪ್ರೊಡಕ್ಷನ್ ಸಂಸ್ಥೆಯು ಆರ್‌ಆರ್‌ಆರ್ ಸಿನಿಮಾದ ವಿತರಣೆ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಇದಕ್ಕೂ ಮುನ್ನ, ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡಲು ಕೆವಿಎನ್ ಪ್ರೊಡಕ್ಷನ್ ಸಂಸ್ಥೆಯ ಮಾಲೀಕ ವೆಂಕಟ್ ಕೊಣಂಕಿ, ಮಾರ್ಚ್ 19ರಂದು ಚಿಕ್ಕಬಳ್ಳಾಪುರದ ಅಗಲಗುರ್ಕಿಯಲ್ಲಿ ಭರ್ಜರಿ ಪ್ಲಾನ್ ಮಾಡಿದ್ದಾರೆ.
ನೂರೆಕರೆ ಜಾಗದಲ್ಲಿ ಎರಡು ಲಕ್ಷ ಜನರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎನ್ನಲಾಗುತ್ತಿದೆ. ಈಗಾಗಲೇ ಅಗಲಗುರ್ಕಿಯಲ್ಲಿ ಆರ್‌ಆರ್‌ಆರ್ ಸಿನಿಮಾದ ಕಾರ್ಯಕ್ರಮಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಿವರಾಜ್ಕುಮಾರ್ ಬರಲಿದ್ದಾರೆ. ಜೊತೆಗೆ ಚಿಕ್ಕಬಳ್ಳಾಪುರ ಶಾಸಕ, ಆರೋಗ್ಯ ಸಚಿವ ಕೆ.ಸುಧಾಕರ್ ಅವರು ಕೂಡ ಈ ಕಾರ್ಯಕ್ರಮದಲ್ಲಿ ಇರಲಿದ್ದಾರೆ. ಆರ್‌ಆರ್‌ಆರ್ ಸಿನಿಮಾದ ನಿರ್ದೇಶಕ ಎಸ್.ಎಸ್.ರಾಜಮೌಳಿ, ರಾಮ್ ಚರಣ್,ಆಲಿಯಾ ಭಟ್, ಜ್ಯೂ.ಎನ್ಟಿಆರ್, ಅಜಯ್ ದೇವಗನ್ ಸೇರಿದಂತೆ ಸಾಕಷ್ಟು ಕಲಾವಿದರು ಭಾಗಿಯಾಗಲಿದ್ದಾರೆ.
ಇದೇ ವೇಳೆ, ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ಅವರು ಲೈವ್ ಕಾರ್ಯಕ್ರಮ ನೀಡಲಿದ್ದಾರೆ. ಜೊತೆಗೆ ಪುನೀತ್ ರಾಜ್ಕುಮಾರ್ ಅವರಿಗೆ ನಮನ ಸಲ್ಲಿಸಲಾಗುತ್ತದೆ. 25 ಸಾವಿರ ಚದರ ಅಡಿಯ ಬೃಹತ್ ಎಲ್ಇಡಿ ಸ್ಕ್ರೀನ್ ಮತ್ತು 45 ಬೃಹತ್ ಲೇಸರ್ ಲೈಟ್ಗಳ ದೊಡ್ಡ ವೇದಿಕೆ ಸಿದ್ಧವಾಗುತ್ತಿದೆ.
ಬಾಹುಬಲಿ ಚಿತ್ರದ ಯಶಸ್ಸಿನ ಬಳಿಕ ರಾಜಮೌಳಿ ನಿರ್ದೇಶನ ಮಾಡಿರುವ ಅದ್ದೂರಿ ಸಿನಿಮಾ ಇದಾಗಿದೆ. ಹೀಗಾಗಿ, ಸಹಜವಾಗಿಯೇ ನಿರೀಕ್ಷೆ ಜೋರಾಗಿದೆ. ಕನ್ನಡಕ್ಕೂ ಡಬ್ ಆಗಿ ‘ಆರ್‌ಆರ್‌ಆರ್’ ಚಿತ್ರ ಬಿಡುಗಡೆ ಆಗುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಾರ್ಚ್ 25ರಂದು ಈ ಚಿತ್ರ ರಿಲೀಸ್ ಆಗುತ್ತಿದೆ.
ಇದನ್ನೂ ಓದಿ: ಥಿಯೇಟರ್ಗಳಲ್ಲಿ ಡಾ.ರಾಜ್ ಕಾಲದ ಸಂಭ್ರಮ ತಂದುಕೊಟ್ಟ 'ಜೇಮ್ಸ್'