ಡಾ. ರಾಜ್ಕುಮಾರ್ ಕುರಿತು ಇತ್ತೀಚೆಗೆ ಬಿಡುಗಡೆಯಾಗಿರುವ 'ರಾಜಕುಮಾರ ಪಂಚಪದಿ' ಪುಸ್ತಕ ಹೊಸ ದಾಖಲೆಯನ್ನೇ ಮಾಡಿದೆ. ಸಾಮಾನ್ಯವಾಗಿ ಒಂದು ಪುಸ್ತಕ ಒಮ್ಮೆ ಅಥವಾ ಎರಡು ಬಾರಿ ಬಿಡುಗಡೆಯಾಗುವುದು ಸಹಜ. ಆದರೆ ಮಂಜುನಾಥ್ ಹಾಲುವಾಗಿಲು ಬರೆದಿರುವ ಈ ಪುಸ್ತಕವನ್ನು ಒಂದೇ ದಿನದಲ್ಲಿ 113 ಬಾರಿ ಬಿಡುಗಡೆ ಮಾಡಿ, ಹೊಸ ದಾಖಲೆಯನ್ನೇ ಬರೆಯಲಾಗಿದೆ.
'ರಾಜಕುಮಾರ ಪಂಚಪದಿ' ಪುಸ್ತಕವನ್ನು ಶಿವರಾಜ್ಕುಮಾರ್, ಪುನೀತ್ ರಾಜ್ಕುಮಾರ್, ಜಗ್ಗೇಶ್, ಯುವ ರಾಜ್ಕುಮಾರ್, ಧ್ರುವ, ಲವ್ಲಿ ಸ್ಟಾರ್ ಪ್ರೇಮ್, ಬರಗೂರು ರಾಮಚಂದ್ರಪ್ಪ, ದಲಿತ ಕವಿ ಸಿದ್ದಲಿಂಗಯ್ಯ, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಹೆಚ್.ಎಸ್. ವೆಂಕಟೇಶಮೂರ್ತಿ, ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್, ಸಂಸದ ತೇಜಸ್ವಿ ಸೂರ್ಯ ತೇಜಸ್ವಿನಿ ಅನಂತ್ ಕುಮಾರ್ ಸೇರಿದಂತೆ ಹಲವು ಗಣ್ಯರು 113 ಪ್ರತ್ಯೇಕ ಸ್ಥಳಗಳಲ್ಲಿ ಬಿಡುಗಡೆ ಮಾಡಿರುವುದು ವಿಶೇಷ. ಈ ಪುಸ್ತಕದಲ್ಲಿ ಡಾ. ರಾಜ್ಕುಮಾರ್ ಅವರ ಮೊದಲ ಚಿತ್ರ 'ಬೇಡರ ಕಣ್ಣಪ್ಪ'ದಿಂದ ಪ್ರಾರಂಭಿಸಿ, ಕೊನೆಯ ಸಿನಿಮಾ'ಶಬ್ಧವೇಧಿ'ಯವರೆಗೂ ಎಲ್ಲಾ ಚಿತ್ರಗಳ ಪ್ರಮುಖ ಅಂಶಗಳನ್ನು ಐದು ಸಾಲುಗಳಲ್ಲಿ ಬರೆಯಲಾಗಿದೆ. ಮೊದಲ ಸಾಲು 'ರಾ' ಅಕ್ಷರದಿಂದ ಶುರುವಾದರೆ, ಎರಡನೆಯ ಸಾಲು 'ಜ' ಅಕ್ಷರದಿಂದ ಶುರುವಾಗುತ್ತದೆ. ಐದು ಸಾಲುಗಳ ಮೊದಲ ಅಕ್ಷರಗಳನ್ನು ಕೂಡಿಸಿದರೆ 'ರಾಜಕುಮಾರ' ಎಂದಾಗುತ್ತದೆ. ಇದಲ್ಲದೆ ಚಿತ್ರದ ಕುರಿತಾಗಿ ಹಲವು ವೈಶಿಷ್ಟ್ಯಗಳನ್ನು ಕೇವಲ ಐದು ಸಾಲುಗಳಲ್ಲಿ ವಿವರಿಸಲಾಗಿದೆ. 'ರಾಜಕುಮಾರ ಪಂಚಪದಿ' ಪುಸ್ತಕವನ್ನು ಸ್ನೇಹ ಬುಕ್ ಹೌಸ್ ಹೊರತಂದಿದ್ದು, ಈಗಾಗಲೇ ಎಲ್ಲಾ ಪ್ರಮುಖ ಪುಸ್ತಕದಂಗಡಿಗಳಲ್ಲಿ ಲಭ್ಯವಿದೆ.