ಡ್ರಗ್ಸ್ ಪ್ರಕರಣದಲ್ಲಿ ಅರೆಸ್ಟ್ ಆಗಿ 144 ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ರಾಗಿಣಿ ಕಳೆದ ವಾರವಷ್ಟೇ ಬಿಡುಗಡೆಯಾಗಿದ್ದಾರೆ. ಜೈಲಿನಲ್ಲಿದ್ದಾಗ ಸಾಕಷ್ಟು ನೋವು ಮತ್ತು ಹಿಂಸೆ ಅನುಭವಿಸಿದರೂ ಅಲ್ಲಿಂದ ಹೊರ ಬಂದ ನಂತರ ರಾಗಿಣಿ ಲವಲವಿಕೆಯಿಂದ ಓಡಾಡಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಅವರು ತಮ್ಮ ತಂದೆ-ತಾಯಿ ಜೊತೆಗೆ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಹೋಗಿ, ದೇವರ ದರ್ಶನ ಮಾಡಿಕೊಂಡು ಬಂದಿದ್ದಾರೆ.
ಇಂದು ಬೆಂಗಳೂರಿನ ಕಾಟನ್ಟೇಟೆಯಲ್ಲಿರುವ ತವಕ್ಕಲ್ ಮಸ್ತಾನ್ ದರ್ಗಾದಲ್ಲಿ ಬಡವರಿಗೆ ಆಹಾರ ಹಂಚುವುದರ ಜೊತೆಗೆ ನಳಭೀಮ ರೆಸ್ಟೋರೆಂಟ್ ಎಂಬ ಹೊಸ ಹೋಟೆಲ್ ಉದ್ಘಾಟನೆ ಮಾಡಲಿದ್ದಾರೆ. ಜೈಲಿಗೆ ಹೋದ ಬಂದ ಮೇಲೆ ತಮ್ಮ ಆತ್ಮಸ್ಥೈರ್ಯ ಸ್ವಲ್ಪವೂ ಕುಗ್ಗಿಲ್ಲ ಎನ್ನುತ್ತಾರೆ ರಾಗಿಣಿ. ಈ ಕುರಿತು ಮಾತನಾಡಿರುವ ಅವರು, "ನನ್ನ ಕುಟುಂಬದವರೇ ನನಗೆ ದೊಡ್ಡ ಶಕ್ತಿ. ಅವರು ನನ್ನ ಜೊತೆಗೆ ನಿಂತಿರುವುದರಿಂದ, ಎಂದಿಗೂ ನನ್ನ ಆತ್ಮಸ್ಥೈರ್ಯ ಕಡಿಮೆಯಾಗುವುದಿಲ್ಲ. ಜನರು ನನ್ನನ್ನು ನೋಡುವ ರೀತಿ ಬದಲಾಗಬಹುದು. ಆದರೆ, ನಾನು ಬದಲಾಗಿಲ್ಲ" ಎನ್ನುತ್ತಾರೆ ರಾಗಿಣಿ.
ಇದನ್ನೂ ಓದಿ: ಟ್ವಿಟ್ಟರ್ನಿಂದಲೇ ಡಿಲೀಟ್ ಆಯ್ತು ಕಂಗನಾ ಟ್ವೀಟ್ : ಅಂಥದ್ದೇನಿತ್ತು..!
ರಾಗಿಣಿ ಹೆಸರು ಡ್ರಗ್ಸ್ ಪ್ರಕರಣದಲ್ಲಿ ಕೇಳಿ ಬರುವುದಕ್ಕಿಂತ ಮುನ್ನ ಅವರು, ಜೋಗಿ ಪ್ರೇಮ್ ಜೊತೆ 'ಗಾಂಧಿಗಿರಿ' ಎಂಬ ಚಿತ್ರದಲ್ಲಿ ನಟಿಸುತ್ತಿದ್ದರು. ಅವರು ಜೈಲಿಗೆ ಹೋಗಿದ್ದರಿಂದ, ಚಿತ್ರದ ಭವಿಷ್ಯ ಕತ್ತಲಲ್ಲಿತ್ತು. ಇದೀಗ ರಾಗಿಣಿ, ಆ ಚಿತ್ರದಲ್ಲಿ ತಮ್ಮ ಭಾಗದ ಕೆಲಸಗಳನ್ನು ಮೊದಲು ಮುಗಿಸುವುದಕ್ಕೆ ಮುಂದಾಗಿದ್ದಾರೆ. 15 ದಿನಗಳ ಚಿತ್ರೀಕರಣ ಬಾಕಿ ಉಳಿದಿದ್ದು, ಅದನ್ನು ಮೊದಲು ಮುಗಿಸುವುದಕ್ಕೆ ಮುಂದಾಗಿದ್ದಾರೆ. ಇದಲ್ಲದೆ, ಅವರು ನಾಲ್ಕು ಕಥೆಗಳನ್ನು ಕೇಳಿದ್ದಾರಂತೆ. ಈ ಪೈಕಿ ಸದ್ಯದಲ್ಲೇ ಹೊಸ ಸಿನಿಮಾ ಘೋಷಣೆ ಆಗಲಿದೆ ಎನ್ನುತ್ತಾರೆ ರಾಗಿಣಿ. ನಟಿಯಾಗಿಯೇ ಮುಂದುವರೆಯುವ ವಿಶ್ವಾಸವನ್ನು ವ್ಯಕ್ತಪಡಿಸುವ ರಾಗಿಣಿ ಮುಂದಿನ ದಿನಗಳಲ್ಲಿ ಇನ್ನಷ್ಟು ಒಳ್ಳೆಯ ಕೆಲಸಗಳನ್ನು ಮಾಡುವುದಾಗಿ ಹೇಳುತ್ತಾರೆ.