ಸಿನಿಮಾ ಸ್ಟಾರ್ಗಳು ತೆರೆ ಮೇಲೆ ಹಾಗೂ ಕಾರ್ಯಕ್ರಮಗಳಲ್ಲಿ ಇರುವಂತೆ ಮನೆಯಲ್ಲಿ ಇರುವುದಿಲ್ಲ. ಮನೆಯವರೊಂದಿಗೆ ಸಾಮಾನ್ಯರಂತೆ ಇರುತ್ತಾರೆ. ಬಿಡುವಿನ ವೇಳೆ ಕುಟುಂಬದವರೊಂದಿಗೆ ಸೇರಿ ಪುಟ್ಟ ಮಕ್ಕಳಂತೆ ಕಾಲ ಕಳೆಯುತ್ತಾರೆ. ಇದಕ್ಕೊಂದು ಹೊಸ ಉದಾಹರಣೆ ನಟಿ ರಾಗಿಣಿ ದ್ವಿವೇದಿ.
ಒಬ್ಬೊಬ್ಬರು ಸೆಲಬ್ರಿಟಿಗಳಿಗೆ ಒಂದೊಂದು ರೀತಿಯ ಕ್ರೇಜ್ ಇರುತ್ತದೆ. ತೆರೆ ಮೇಲೆ ಗ್ಲಾಮರಸ್ ಆಗಿ, ಬೊಂಬಾಟ್ ಆ್ಯಕ್ಟಿಂಗ್ ಮಾಡುವ ರಾಗಿಣಿ ದ್ವಿವೇದಿ ಮನೆಯಲ್ಲಿ ಮರ ಹತ್ತಿ ನೇರಳೆ ಹಣ್ಣು ಕೀಳುತ್ತಿರುವ ವಿಡಿಯೋ ವೈರಲ್ ಆಗಿದೆ. ಇತ್ತೀಚೆಗೆ ರಾಗಿಣಿ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಇನ್ನು ಬಹಳ ದಿನಗಳ ನಂತರ ಬಾಂಬೆಯಿಂದ ಬೆಂಗಳೂರಿಗೆ ಬಂದ ಅಮ್ಮನಿಗಾಗಿ ಮನೆಯ ಬಳಿ ಇರುವ ನೇರಳೆ ಮರವೊಂದಕ್ಕೆ ಹತ್ತಿ ನೇರಳೆ ಹಣ್ಣು ಕಿತ್ತುಕೊಟ್ಟಿದ್ದಾರೆ. ರಾಗಿಣಿ ಜೊತೆ ಪುಟ್ಟ ಮಕ್ಕಳು ಕೂಡಾ ಇದ್ದಾರೆ. ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತಿರುವ ರಾಗಿಣಿಯನ್ನು ನೋಡಿದರೆ, ಸಿನಿಮಾದಲ್ಲಿ ನಟಿಸುವ ಆ ರಾಗಿಣಿ ಇವರೇನಾ ಎನ್ನಿಸುವುದು ಗ್ಯಾರಂಟಿ.