ಎಲ್ಲಾ ವಾಹಿನಿಗಳಲ್ಲೂ ಇದೀಗ ಮಹಾಸಂಗಮಗಳ ಸುರಿಮಳೆ. ಉದಯ ವಾಹಿನಿಯಲ್ಲಿಯೂ ಮನಸಾರೆ ಆಕೃತಿ ಮಹಾಸಂಗಮ ಶುರುವಾಗಿದೆ.
ಮನಸಾರೆ ಧಾರಾವಾಹಿಯಲ್ಲಿ ಅಪ್ಪನ ಪ್ರೀತಿಗಾಗಿ ಕಾಯುತ್ತಿರುವ ಪ್ರಾರ್ಥನಾ ಮತ್ತು ಅಪ್ಪನನ್ನೇ ಕಳೆದುಕೊಂಡ ದಿವ್ಯಾ ಇವರಿಬ್ಬರು ಮುಖಮುಖಿಯಾಗುವುದೇ ಈ ಮಹಾಸಂಗಮದ ವಿಶೇಷ. ರಂಗಿತರಂಗ ಖ್ಯಾತಿಯ ನಟಿ ರಾಧಿಕಾ ಈ ಧಾರಾವಾಹಿಯಲ್ಲಿ ವಿಶೇಷ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ದಿವ್ಯಾ ಬಾಲು ಹಾಗೂ ಆನಂದ್, ಪ್ರಾರ್ಥನಾ ಲೈಫಲ್ಲಿ ಬರೋ ಪ್ರಮುಖ ಪಾತ್ರಧಾರಿಯಾಗಿ ಬಂದು, ಹಲವಾರು ನಿಗೂಢ ಸತ್ಯಗಳನ್ನು ಬಯಲು ಮಾಡಲಿದ್ದಾರೆ.
ತಂದೆಯನ್ನು ಉಳಿಸಲು ಚಾಮುಂಡಿ ರೂಪದಲ್ಲಿ ಭೂಪತಿಯನ್ನ ಮರ್ದನ ಮಾಡುತ್ತಾಳೆ ಪ್ರಾರ್ಥನಾ. ನಂತರ ಪ್ರಾರ್ಥನಾ, ಆನಂದ್ ಕಾಡಿನಲ್ಲಿ ಕಳೆದುಹೋಗುತ್ತಾರೆ. ಈ ಮಧ್ಯೆ ದೇವಕಿ, ಪಾವನಿ, ಯುವ ಮತ್ತು ವಾಸುಕಿ ಅವರಿಬ್ಬರನ್ನು ಹುಡುಕುತ್ತಾರೆ. ಆಕೃತಿಯಲ್ಲಿ ಭೈರವಿಯನ್ನು ಹುಡುಕುತ್ತಿರೋ ದಿವ್ಯಾ ಪಾವನಿ ಕುಟುಂಬವನ್ನು ಅನಿರೀಕ್ಷಿತವಾಗಿ ಭೇಟಿಯಾಗುತ್ತಾರೆ. ದಿವ್ಯಾ ಮತ್ತು ಪಾವನಿ ಕುಟುಂಬ ಒಂದಾಗಿ, ಕಳೆದು ಹೋಗಿರೋ ಆನಂದ್ ಮತ್ತು ಪ್ರಾರ್ಥನಾ ಹಾಗೂ ಭೈರವಿಯನ್ನ ಹುಡುಕುತ್ತಾರೆ.
ಮತ್ತೊಂದೆಡೆ ಪರಿಸ್ಥಿತಿಯ ಕೈಗೊಂಬೆಯಾಗಿರೋ ಆನಂದ್, ಇಷ್ಟವಿಲ್ಲದಿದ್ದರೂ ಪ್ರಾರ್ಥನಾ ಜೊತೆ ಕಾಡಿನಲ್ಲಿ ಅಲೆದಾಡುವಾಗ ಆಕೃತಿಯಿಂದ ಅಪಾಯಕ್ಕೆ ಒಳಗಾಗುತ್ತಾರೆ. ಹರಕೆ ಆಟದಿಂದ ಕೋಪಗೊಂಡ ಆಕೃತಿ ಕಡೆ ಮನೆಯಲ್ಲಿರೋ ಏಲ್ಲರನ್ನೂ ಬಲಿ ಪಡೆಯಲು ಪ್ರಯತ್ನಿಸುತ್ತದೆ.
ಪ್ರಾಣಕ್ಕಾಗಿ ಹೋರಾಡುತ್ತಿರೋ ಆನಂದ್ ಮತ್ತು ಪ್ರಾರ್ಥನಾ ಹೇಗೆ ಬಚಾವಾಗುತ್ತಾರೆ? ದಿವ್ಯಾ ಬಾಲುವಿನ ನಡುವೆ ಇರೋ ವೈಮನಸ್ಸು ಸರಿ ಹೋಗುತ್ತಾ? ಆಕೃತಿಯಿಂದ ಪಾವನಿ ಮತ್ತು ದಿವ್ಯಾ ಕುಟುಂಬಕ್ಕೆ ಆಗೋ ತೊಂದರೆಗಳಿಗೆ ಮುಕ್ತಿ ದೊರೆಯುವುದೇ? ಇವೆಲ್ಲದರ ಮಧ್ಯೆ ರಾಧಿಕಾ ನಾರಾಯಣ್ ಯಾವ ರೀತಿಯಾಗಿ ಆಕೃತಿ ಮತ್ತು ಮನಸಾರೆ ಪಾತ್ರಗಳಿಗೆ ಶಕ್ತಿಯಾಗಿ ನಿಲ್ಲುತ್ತಾರೆ ಎಂಬ ಹಲವು ರೋಚಕ ಸನ್ನಿವೇಶಗಳನ್ನೊಳಗೊಂಡಿರುವ ವಿಶೇಷ ಸಂಚಿಕೆಯೇ ಮನಸಾರೆ ಆಕೃತಿ ಮಹಾಸಂಗಮ.
ಈ ವಿಶೇಷ ಸಂಚಿಕೆಗಳು ಶನಿವಾರ ಮತ್ತು ಭಾನುವಾರ ರಾತ್ರಿ 9:30ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿವೆ.