ಚಂದನವನದಲ್ಲಿ ವಿಭಿನ್ನ ಟೈಟಲ್ ಇರಿಸಿಕೊಂಡು ಸಾಕಷ್ಟು ಸಿನಿಮಾಗಳು ತಯಾರಾಗುತ್ತಿವೆ. ಇದರ ಜೊತೆಗೆ ಹೊಸ ನಟ/ನಟಿಯರು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಅದೇ ರೀತಿ 'ಕಾರ್ಮೋಡ ಸರಿದು' ಸಿನಿಮಾ ಕೂಡಾ ಸಾಕಷ್ಟು ವಿಶೇಷತೆಗಳಿಂದ ಕೂಡಿದೆ.
ನಾಗತಿಹಳ್ಳಿ ಚಂದ್ರಶೇಖರ್ ಬಳಿ ಎಡಿಟರ್ ಆಗಿದ್ದ ಉದಯ್ ಕುಮಾರ್ ಎಂಬುವರು ನಿರ್ದೇಶಿಸಿರುವ 'ಕಾರ್ಮೋಡ ಸರಿದು' ಸಿನಿಮಾಗಾಗಿ ಬಾಹುಬಲಿ ಚಿತ್ರಕ್ಕೆ ಹಾಡಿದ್ದ ಗಾಯಕರೇ ಇದರಲ್ಲೂ ಹಾಡಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಕೂಡಾ ಈ 'ಕಾರ್ಮೋಡ ಸರಿದು' ಚಿತ್ರದ ಟ್ರೇಲರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಾನು ಕೂಡ ಒಂದು ಪ್ರೊಡಕ್ಷನ್ ಸಂಸ್ಥೆ ಹೊಂದಿದ್ದು, ಮೇಲಾಗಿ ತಾನೊಬ್ಬ ನಟನಾಗಿದ್ದು ಮತ್ತೋರ್ವ ನಟ ಹಾಗೂ ಮತ್ತೊಂದು ಪ್ರೊಡಕ್ಷನ್ ಸಂಸ್ಥೆ ನಿರ್ಮಿಸಿರುವ ಸಿನಿಮಾವನ್ನು ಪ್ರೋತ್ಸಾಹಿಸುವುದು ಒಳ್ಳೆಯದು ಎನ್ನುವ ಮೂಲಕ ಚಿತ್ರತಂಡಕ್ಕೆ ವಿಶ್ ಮಾಡಿದ್ದಾರೆ.
ಯುವ ನಟ ಮಂಜು ರಾಮಣ್ಣನಿಗೆ ಅದ್ವಿತಿ ನಾಯಕಿಯಾಗಿ ನಟಿಸಿದ್ದಾರೆ. ಮಲೆನಾಡಿನಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುವ ಪಾತ್ರದಲ್ಲಿ ಅದ್ವಿತಿ ನಟಿಸಿದ್ದಾರೆ. ಕುದುರೆಮುಖ ಟಾಕೀಸ್ ಬ್ಯಾನರ್ ಅಡಿ ಶ್ವೇತಾ ಜಿ.ಆರ್. ಈ ಸಿನಿಮಾ ನಿರ್ಮಿಸಿದ್ದಾರೆ. ಟ್ರೇಲರ್ ನೋಡಿದರೆ ಸಿನಿಮಾದ ಮೇಲೆ ಕುತೂಹಲ ಹೆಚ್ಚಾಗುವುದು ಖಂಡಿತ. ಸಿನಿಮಾ ಇದೇ ತಿಂಗಳ 17 ರಂದು ತೆರೆ ಕಾಣುತ್ತಿದೆ.