ಕೊರೊನಾ ಭೀತಿ ಆರಂಭವಾದಾಗಿನಿಂದ ಪವರ್ಸ್ಟಾರ್ ಪುನೀತ್ ರಾಜ್‍ಕುಮಾರ್ ಕಳೆದ 4-5 ತಿಂಗಳಿಂದ ಹೊರಗೆ ಹೋಗದೆ ಮನೆಯಲ್ಲಿ ಕುಟುಂಬದವರೊಂದಿಗೆ ಕಾಲ ಕಳೆಯುತ್ತಿದ್ದಾರೆ. ಆದರೆ ಮನೆಯಲ್ಲಿ ಸುಮ್ಮನೆ ಕೂರದೆ ಪುನೀತ್ ಸಿನಿಮಾ ಸ್ಕ್ರಿಪ್ಟ್ಗಳ ಬಗ್ಗೆ ಆತ್ಮೀಯರೊಂದಿಗೆ ಚರ್ಚೆ ನಡೆಸುತ್ತಾರೆ, ಸಿನಿಮಾಗಳನ್ನು ನೋಡುತ್ತಾರೆ.
ಪುನೀತ್ ಮನೆಯಲ್ಲಿ ಇದ್ದರೂ ವರ್ಕೌಟ್ಗೆ ಬಹಳ ಆದ್ಯತೆ ನೀಡುತ್ತಾರೆ. ಈಗಾಗಲೇ ಪುನೀತ್ ವರ್ಕೌಟ್ ಮಾಡುತ್ತಿರುವ ಬಹಳಷ್ಟು ವಿಡಿಯೋಗಳು ವೈರಲ್ ಆಗಿವೆ. ಅಪ್ಪುವಿನ ಈ ವರ್ಕೌಟ್ ನೋಡಿ ಎಲ್ಲರೂ ಫಿದಾ ಆಗಿರುವುದುಂಟು. ಪವರ್ ಸ್ಟಾರ್ಗೆ ಚಾಲೆಂಜಿಂಗ್ ವರ್ಕೌಟ್ಗಳನ್ನು ಮಾಡುವುದು ಬಹಳ ಇಷ್ಟವಂತೆ. ಬಾಲ್ಯದಲ್ಲೇ ಕಳರಿಪಯಟ್ಟು ಹಾಗೂ ಜಿಮ್ನಾಸ್ಟಿಕ್ ಕಲಿತಿರುವ ಪುನೀತ್ ರಾಜ್‍ಕುಮಾರ್ ಫ್ರೆಂಟ್ ಪ್ಲಿಫ್ ಹಾಗೂ ಬ್ಯಾಕ್ ಪ್ಲಿಫ್ಗಳನ್ನು ನೀರು ಕುಡಿದ ರೀತಿ ಸಲೀಸಾಗಿ ಮಾಡುತ್ತಾರೆ.
ಪವರ್ ಸ್ಟಾರ್ ಪರ್ಸನಲ್ ಜಿಮ್ ಟ್ರೈನರ್ ಶುಭಾಕರ್ ಶೆಟ್ಟಿ ಹೇಳುವ ಪ್ರಕಾರ. ಪುನೀತ್ ರಾಜ್‍ಕುಮಾರ್ ಚಿಕ್ಕ ವಯಸ್ಸಿನಿಂದಲೇ ಈ ರೀತಿಯ ಸ್ಟಂಟ್ಗಳನ್ನು ಮಾಡುತ್ತಿದ್ದರಂತೆ. ಇದೇ ರೀತಿಯ ಸುಮಾರು 10 ಬಗೆಯ ಚಾಲೆಂಜಿಂಗ್ ವರ್ಕೌಟ್ಗಳನ್ನು ಅವರು ಮಾಡುತ್ತಾರೆ. ಈ ರೀತಿ ಮಾಡುವುದರಿಂದ ದೇಹ ಫ್ಲೆಕ್ಸಿಬಲ್ ಆಗಿರುತ್ತದೆ ಹಾಗೂ ಆರೋಗ್ಯಕ್ಕೂ ಒಳ್ಳೆಯದು ಎನ್ನುತ್ತಾರೆ.
ಪುನೀತ್ ರಾಜ್‍ಕುಮಾರ್ ಅವರ ಈ ಚಾಲೆಂಜಿಂಗ್ ವರ್ಕೌಟ್ಗಳನ್ನು ನೋಡಿ ಡಾ. ರಾಜ್‍ಕುಮಾರ್ ಕೂಡಾ ಇಷ್ಟಪಟ್ಟಿದ್ದರಂತೆ. ಸದಾ ಫಿಟ್ ಹಾಗೂ ಆರೋಗ್ಯವಾಗಿರಬೇಕು ಎಂದು ಬಯಸುವ ಪುನೀತ್ ಈ ರೀತಿಯ ಚಾಲೆಂಜಿಂಗ್ ವರ್ಕೌಟ್ಗಳನ್ನು ಪ್ರತಿನಿತ್ಯ ತಪ್ಪದೆ ಮಾಡುತ್ತಾರಂತೆ. ಒಟ್ಟಿನಲ್ಲಿ ಈ ವರ್ಕೌಟ್ ನೋಡಿ ಅಭಿಮಾನಿಗಳು ಥ್ರಿಲ್ ಆಗಿರುವುದಂತೂ ನಿಜ.