‘ರಾಮಾ ರಾಮಾ ರೇ’ ಹಾಗೂ 'ಒಂದಲ್ಲ ಎರಡಲ್ಲ' ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಹುಟ್ಟಿಸಿರುವ ನಿರ್ದೇಶಕ ಸತ್ಯ ಪ್ರಕಾಶ್. ಒಂದಲ್ಲ ಎರಡಲ್ಲ ಸೂಕ್ಷ್ಮ ಕಥೆ ಹೆಣೆದಿರುವ ಇವರು ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.
ನಂತರ ಸತ್ಯ ಪ್ರಕಾಶ್ ಪುನೀತ್ ರಾಜ್ಕುಮಾರ್ ನಟನೆಯ ಚಿತ್ರಕ್ಕೆ ನಿರ್ದೇಶನ ಮಾಡುತ್ತಾರೆ ಎಂಬ ಸುದ್ದಿ ಜೋರಾಗಿ ಕೇಳಿಬಂದಿತ್ತು. ಆದರೆ ಕೋವಿಡ್ ಲಾಕ್ಡೌನ್ನಿಂದಾಗಿ ಚಿತ್ರ ಸೆಟ್ಟೇರಲೇ ಇಲ್ಲ. ಈ ನಡುವೆ ಮತ್ತೊಂದು ಸಿನಿಮಾಗಾಗಿ ಪುನೀತ್ ಮತ್ತು ಸತ್ಯ ಪ್ರಕಾಶ್ ಕೈ ಜೋಡಿಸಿದ್ದಾರೆ.
‘ಮ್ಯಾನ್ ಆಫ್ ದಿ ಮ್ಯಾಚ್’ ಚಿತ್ರದ ಬಗ್ಗೆ ಸತ್ಯಪ್ರಕಾಶ್ ಪುನೀತ್ ಅವರ ಬಳಿ ಹೇಳಿದ್ದರು. ಹೊಸ ಕಲಾವಿದರಗಾಗಿಯೇ ತಯಾರಿಸಿದ್ದ ಆ ಕಥಾವಸ್ತು ಹಾಗೂ ಚಿತ್ರಕಥೆಯಲ್ಲಿದ್ದ ಹೊಸತನ ಪುನೀತ್ ಅವರಿಗೂ ಸಹ ಮೆಚ್ಚುಗೆಯಾಗಿ ಚಿತ್ರೀಕರಣಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಪಿಆರ್ಕೆ ಪ್ರೊಡಕ್ಷನ್ಸ್, ಸತ್ಯ ಮತ್ತು ಮಯೂರ ಪಿಕ್ಚರ್ಸ್ ಲಾಂಛನದಲ್ಲಿ ಮೂಡಿಬರುತ್ತಿರುವ ಈ ಚಿತ್ರವು ಏಪ್ರಿಲ್ನಲ್ಲಿ ಶುರುವಾಗಿ, ಬಹುತೇಕ ಚಿತ್ರೀಕರಣ ಮುಗಿದಿದೆ. ಸದ್ಯ ನಿರ್ಮಾಣ ನಂತರ ಕೆಲಸಗಳು ನಡೆಯುತ್ತಿದ್ದು, ಅಂತಿಮ ಹಂತದ ಚಿತ್ರೀಕರಣಕ್ಕೆ ಪುನೀತ್ ರಾಜ್ ಕುಮಾರ್ ಭೇಟಿ ನೀಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
‘ಮ್ಯಾನ್ ಆಫ್ ದಿ ಮ್ಯಾಚ್’ ಅಂತ ಟೈಟಲ್ ಕೇಳುತ್ತಿದ್ದಂತೆಯೇ ಇದೇನು ಕ್ರಿಕೆಟ್‌ಗೆ ಸಂಬಂಧಿಸಿದ ಸಿನಿಮಾನಾ ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ, ಇದು ಯಾವುದೇ ಕ್ರೀಡೆಗೆ ಸಂಬಂಧಿಸಿದ ಸಿನಿಮಾ ಅಲ್ಲ. ಬದಲಿಗೆ ಸಿನಿಮಾವೊಂದರ ಆಡಿಷನ್ ಪ್ರಕ್ರಿಯೆಯಲ್ಲಿ ನಡೆಯುವ ಪ್ರಸಂಗಗಳೇ ಈ ಸಿನಿಮಾದ ಕಥೆ ಅನ್ನೋದು ನಿರ್ದೇಶಕ ಸತ್ಯ ಪ್ರಕಾಶ್ ಮಾತು.
ರಾಮಾ ರಾಮಾ ರೇ ಚಿತ್ರದ ನಟರಾದ ಧರ್ಮಣ್ಣ, ನಟರಾಜ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಧರ್ಮಣ್ಣ ನಿರ್ಮಾಪಕನಾಗಿ ಕಾಣಿಸಿಕೊಂಡರೆ, ನಿರ್ದೇಶಕನಾಗಿ ನಟರಾಜ್ ಇರಲಿದ್ದಾರೆ. ಇನ್ನು, ವೀಣಾ ಸುಂದರ್ ಮತ್ತು ಸುಂದರ್ ವೀಣಾ ಅವರು ಕೂಡ ಚಿತ್ರದಲ್ಲಿ ದಂಪತಿಯಾಗಿಯೇ ಕಾಣಿಸಿಕೊಳ್ಳಲಿದ್ದಾರೆ. ವಾಸುಕಿ ವೈಭವ್ ಚಿತ್ರಕ್ಕೆ ಸಂಗೀತ ನೀಡುತ್ತಿದ್ದು, ಚಿತ್ರದಲ್ಲೂ ಅವರು ಸಂಗೀತ ನಿರ್ದೇಶಕ ವಾಸುಕಿ ವೈಭವ್ ಆಗಿಯೇ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ 50ಕ್ಕೂ ಅಧಿಕ ಹೊಸ ಪ್ರತಿಭೆಗಳು ಮ್ಯಾನ್ ಆಫ್ ದಿ ಮ್ಯಾಚ್‌ನಲ್ಲಿ ಬಣ್ಣ ಹಚ್ಚಲಿದ್ದಾರೆ. ಲವಿತ್ ಮತ್ತು ಮದನ್ ಛಾಯಾಗ್ರಹಣ ಮಾಡುತ್ತಿದ್ದಾರೆ. ಸುಂದರ್ ವೀಣಾ ನಟಿಸುವುದರ ಜೊತೆಗೆ ಪದ್ಮನಾಭ್ ಭಟ್, ಸತ್ಯಪ್ರಕಾಶ್, ನಾಗೇಂದ್ರ ಎಚ್.ಎಸ್. ಜೊತೆ ಸೇರಿಕೊಂಡು ಸ್ಕ್ರಿಪ್ಟ್ ಕೂಡ ಬರೆದಿದ್ದಾರೆ.
ಇದನ್ನೂ ಓದಿ: bigboss ಸೆಕೆಂಡ್ ಇನ್ನಿಂಗ್ಸ್: ಪ್ರಾಂಕ್ ಆದ ಪ್ರಶಾಂತ್ ಸಂಬರಗಿ