ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯನ್ನ ಕನ್ನಡ ಚಿತ್ರರಂಗದ ಮುಖ್ಯ ಅಂಗವೆಂದು ಕರೆಯಲಾಗುತ್ತದೆ. ಆದರೆ, ಇಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಆರೋಪಿಸಿ ಫಿಲ್ಮ್ ಚೇಂಬರ್ನ ಸದಸ್ಯರಾಗಿರುವ ನಿರ್ಮಾಪಕ ಕೃಷ್ಣೇಗೌಡ ಹಾಗೂ ಮತ್ತೋರ್ವ ನಿರ್ಮಾಪಕ ಪ್ರದೀಪ್ ಎಲ್ ಕೇಸ್ ಹಾಕಿದ್ದಾರೆ.
ಹೀಗಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆಗೆ ಸಹಕಾರ ಸಂಘಗಳ ಉಪನಿಬಂಧನಾ ಅಧಿಕಾರಿ ತಡೆಯೊಡ್ಡಿ, ಮಧ್ಯಂತರ ಆದೇಶ ಹೊರಡಿಸಿದ್ದಾರೆ. ಅಲ್ಲದೇ ತನಿಖೆಗೆ ಆದೇಶಿಸಿದ್ದಾರೆ. ಆದ್ರೂ ವಾಣಿಜ್ಯ ಮಂಡಳಿಯಿಂದ ಇಲ್ಲಿಯತನಕ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
ಹೀಗಾಗಿ ಹಿರಿಯ ನಿರ್ಮಾಪಕ ರಾಜೇಂದ್ರ ಸಿಂಗ್ ಬಾಬು ನೇತೃತ್ವದಲ್ಲಿ, ನಿರ್ಮಾಪಕರಾದ ಶೈಲೇಂದ್ರ ಬಾಬು, ಕೋಟಿ ರಾಮು, ಜೋಸೈಮನ್, ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್, ಪಿ. ಶೇಷಾದ್ರಿ, ಮದನ್ ಪಟೇಲ್, ನಿರ್ದೇಶಕಿ ಹಾಗೂ ನಿರ್ಮಾಪಕಿಯಾಗಿರೋ ವಿಜಯಲಕ್ಷ್ಮಿ ಸಿಂಗ್, ಕವಿತಾ ಲಂಕೇಶ್, ನಟ ಜೈಜಗದೀಶ್, ದ್ವಾರಕೀಶ್ ಮಗ ಯೋಗಿ ದ್ವಾರಕೀಶ್ ಸೇರಿ ಹಲವರು ಖಾಸಗಿ ಹೋಟೆಲ್ನಲ್ಲಿ ಸಭೆ ನಡೆಸಿ, ಫಿಲ್ಮ್ ಚೇಂಬರ್ನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತಿದ್ದಾರೆ.
ನಿರ್ದೇಶಕ ಹಾಗೂ ನಿರ್ಮಾಪಕ ರಾಜೇಂದ್ರ ಸಿಂಗ್ ಬಾಬು ಮಾತನಾಡಿ, ನಮ್ಮ ಕನ್ನಡ ಚಲನಚಿತ್ರ ಮಂಡಳಿಗೆ ಅಮಾವಾಸ್ಯೆ ಕತ್ತಲು ಹಿಡಿದಿದೆ. ಅದು ಬಿಟ್ಟು ಹೋಗೋದಿಲ್ಲ ಅನಿಸುತ್ತೆ. ನಾವು ಫಿಲ್ಮ್ ಚೇಂಬರ್ ಸದಸ್ಯರಾಗಿ, ಫಿಲ್ಮ್ ಚೇಂಬರ್ ಬಗ್ಗೆ ನಾವೇ ಧ್ವನಿ ಎತ್ತುವ ಹಾಗೆ ಆಗಿದೆ. ರಿಜಿಸ್ಟ್ರಾರ್ ಆಫ್ ಸೊಸೈಟಿಯಿಂದ ಫಿಲ್ಮ್ ಚೇಂಬರ್ಗೆ ಒಂದು ಪತ್ರ ಬಂದಿದೆ.
ಅದ್ರಲ್ಲಿ ಸಾಕಷ್ಟು ಆರೋಪಗಳಿವೆ. ಚೇಂಬರ್ ಹೇಗೆ ವರ್ಕ್ ಆಗುತ್ತೆ ಅನ್ನೋದೆ ಗೊತ್ತಾಗ್ತಾ ಇರಲಿಲ್ಲ. ಸದ್ಯ ಕೃಷ್ಣೇಗೌಡ ಮತ್ತು ಪ್ರದೀಪ್ ಅನ್ನೋರು 20 ಅಂಶಗಳಲ್ಲಿ ಅಕ್ರಮ ನಡೆದಿದೆ ಎಂದು ದೂರು ನೀಡಿದ್ದಾರೆ. ಫಿಲ್ಮ್ ಚೇಂಬರ್ನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಬೆಳಕಿಗೆ ಬಂದಿದೆ.
ಹೀಗಾಗಿ, ಈ ಬಾರಿಯ ಚುನಾವಣೆಯನ್ನ ತಡೆ ಹಿಡಿಯಲಾಗಿದೆ. ಈಗಾಗಲೇ ರಿಜಿಸ್ಟ್ರಾರ್ರನ್ನ ನೇಮಕ ಮಾಡಲಾಗಿದೆ. ಆದ್ರೆ, ಮಂಡಳಿಯಿಂದ ರಾಜಕೀಯ ಒತ್ತಡ ತಂದು ಮುಚ್ಚಿ ಹಾಕೋ ಪ್ರಯತ್ನ ನಡೆಯುತ್ತಿದೆ ಅಂತಾ ರಾಜೇಂದ್ರ ಸಿಂಗ್ ಬಾಬು ಆರೋಪಿಸಿದರು.
ಓದಿ:'ಇಂದು ಕಾಮಿಡಿಯಲ್ಲಿ ನಮ್ಮ ವಿಶೇಷ ಅತಿಥಿ..' ಎಂದ ರಕ್ಷಿತಾ..
ಅಷ್ಟೇ ಅಲ್ಲ, ಇಲ್ಲಿ ಸತ್ಯ ಹೊರ ಬರಬೇಕು ಅನ್ನೋ ಉದ್ದೇಶದಿಂದ ನಾವು ರಿಜಿಸ್ಟ್ರಾರ್ಗೆ ಮನವಿ ಮಾಡ್ತಿದ್ದೇವೆ. ಹಾಗೆ ರಿಜಿಸ್ಟ್ರಾರ್ ಆಫೀಸ್ಗೆ ಈ ಮನವಿ ಕೊಟ್ಟು, ಸಿಎಂಗೂ ಒಂದು ಮನವಿ ಕೊಡುತ್ತೇವೆ ಎಂದು ಬಾಬು ಹೇಳಿದರು. ರಾಜೇಂದ್ರ ಸಿಂಗ್ ಬಾಬು ಮಾತಿಗೆ ಶೈಲೇಂದ್ರ ಬಾಬು, ಜ್ಯೋಸೈಮನ್, ನಾಗತಿಹಳ್ಳಿ ಚಂದ್ರಶೇಖರ್, ಪಿ ಶೇಷಾದ್ರಿ, ವಿಜಯಲಕ್ಷ್ಮಿ ಸಿಂಗ್, ಕವಿತಾ ಲಂಕೇಶ್, ಮದನ್ ಪಟೇಲ್ ಸೇರಿ ಸಾಕಷ್ಟು ನಿರ್ಮಾಪಕರು ಬೆಂಬಲ ವ್ಯಕ್ತಪಡಿಸಿದ್ದಾರೆ.