ಟೊರೊಂಟೋ (ಕೆನಡಾ): ಈ ಬಾರಿಯ ಸ್ಲಿಮ್ಡ್-ಡೌನ್ ಟೊರೊಂಟೋ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ರಾಯಭಾರಿಗಳಾಗಿ ಆಹ್ವಾನಿಸಲಾಗಿರುವ 50 ಖ್ಯಾತ ಸಿನಿಮಾ ನಿರ್ಮಾಪಕರು, ನಟರಲ್ಲಿ ಬಾಲಿವುಡ್ ನಟಿ ಪ್ರಿಯಾಂಕ ಛೋಪ್ರಾ ಹಾಗೂ ನಿರ್ಮಾಪಕ ಅನುರಾಗ್ ಕಶ್ಯಪ್ ಸೇರಿದ್ದಾರೆ.
ಈ ಚಿತ್ರೋತ್ಸವ ಈ ವರ್ಷ ಸೆಪ್ಟೆಂಬರ್ 10 ರಿಂದ 19 ವರೆಗೆ ನಡೆಯಲಿದ್ದು ಕೊರೊನಾ ಭೀತಿ ಇರುವುದರಿಂದ ಕಾರ್ಯಕ್ರಮದ ವೇಳೆ ಎಲ್ಲಾ ಮುನ್ನೆಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ಆಸ್ಕರ್ ವಿಜೇತ ನಿರ್ಮಾಪಕರಾದ ಮಾರ್ಟಿನ್ ಸ್ಕಾರ್ಸೆಸ್, ಅಲ್ಫೊನ್ಸೊ ಕ್ಯುರಾನ್, ತೈಕಾ ವೈಟಿಟಿ, ಅವಾ ಡುವೆರ್ನೆ, ರಿಯಾನ್ ಜಾನ್ಸನ್, ಡೆನಿಸ್ ವಿಲ್ಲೆನ್ಯೂವ್ ಹಾಗೂ ನಟರಾದ ನಿಕೋಲ್ ಕಿಡ್ಮನ್, ನಡೈನ್ ಲಬಾಕಿ, ರಿಜ್ ಅಹ್ಮದ್, ಇಸಾಬೆಲ್ಲೆ ಹಪ್ಪರ್ಟ್, ಜಾಂಗ್ ಟಿಫೈ ಸೇರಿದಂತೆ ಇನ್ನಿತರ ಖ್ಯಾತ ಹಾಲಿವುಡ್ ಸೆಲಬ್ರಿಟಿಗಳೊಂದಿಗೆ ಪ್ರಿಯಾಂಕ ಛೋಪ್ರಾ ಹಾಗೂ ಅನುರಾಗ್ ಕಶ್ಯಪ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
45 ನೇ ವರ್ಷದ ಈ ಚಿತ್ರೋತ್ಸವದಲ್ಲಿ ಮೊದಲ 5 ದಿನಗಳ ಕಾಲ ಸುಮಾರು 50 ಸಿನಿಮಾಗಳನ್ನು ಪ್ರದರ್ಶಿಸಲಾಗುವುದು. ಇನ್ನು ಇದೇ ಮೊದಲ ಬಾರಿಗೆ ಟೊರಾಂಟೋ ಚಿತ್ರೋತ್ಸವದಲ್ಲಿ ಡಿಜಿಟಲ್ ಪ್ಲಾಟ್ಫಾರ್ಮ್ ಆರಂಭಿಸಿದ್ದು ಈ ಮೂಲಕ ಟೊರಾಂಟೋ ಹೊರಗಿನ ಪ್ರೇಕ್ಷಕರು ಕೂಡಾ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ವ್ಯವಸ್ಥೆ ಮಾಡಲಾಗಿದೆ.
ಪ್ರಾನ್ಸಿಸ್ ಲೀ ನಿರ್ದೇಶನದ ಅಮೋನೈಟ್, ಹ್ಯಾಲೆ ಬೆರ್ರಿ ನಿರ್ದೇಶನದ ಬ್ಯೂಸ್ಡ್, ರಿಕಿ ಸ್ಟೌಬ್ ನಿರ್ದೇಶನದ ಕಾಂಕ್ರೀಟ್ ಬಾಯ್ಸ್, ನಿಕೋಲಸ್ ಪೆರೆಡಾ ಅವರ ಫೌನಾ ಹಾಗೂ ಇನ್ನಿತರ ಸಿನಿಮಾಗಳು ಈ ಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲಿವೆ. ಕೊರೊನಾ ವೈರಸ್ ಭಯವಿದ್ದರೂ ಕೂಡಾ ನಾವು ಚಿತ್ರೋತ್ಸವಕ್ಕೆ ಯಾವುದೇ ತೊಂದರೆಯಾಗದಂತೆ, ಪ್ರೇಕ್ಷಕರು ಮೆಚ್ಚುವಂತ ಸಿನಿಮಾಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ ಎಂದು ಟಿಐಎಫ್ಎಫ್ ಮುಖ್ಯಸ್ಥ ಕ್ಯಾಮರೂನ್ ಬೈಲಿ ಹೇಳಿದ್ದಾರೆ.