ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪೌರಾಣಿಕ ಧಾರಾವಾಹಿ 'ಹರ ಹರ ಮಹಾದೇವ'ದಲ್ಲಿ ಪಾರ್ವತಿ ಪಾತ್ರಕ್ಕೆ ಬಣ್ಣ ಹಚ್ಚಿದ್ದ ಗುಲ್ಬರ್ಗಾದ ಬೆಡಗಿ ಪ್ರಿಯಾಂಕಾ ಚಿಂಚೋಳಿ, ಇದೀಗ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲು ತಯಾರಾಗಿದ್ದಾರೆ. ಹೌದು ಉದಯ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ಮನಸಾರೆ'ಯಲ್ಲಿ ನಾಯಕಿಯಾಗಿ ಪ್ರಿಯಾಂಕ ಮಿಂಚಲಿದ್ದಾರೆ.
ಎಂ.ಟೆಕ್ ಮಾಡುವಾಗಲೇ ಮಾಡೆಲಿಂಗ್ ಜಗತ್ತಿಗೆ ಕಾಲಿಟ್ಟ ಪ್ರಿಯಾಂಕ, ಅಲ್ಲಿ ಜನಪ್ರಿಯತೆಯನ್ನು ಪಡೆದರು. ಶಿಲ್ಪಾ ಚೌಧರಿ ಮತ್ತು ಪ್ರಸಾದ್ ಬಿದ್ದಪ್ಪನವರ ಮಾಡೆಲಿಂಗ್ ಗರಡಿಯಲ್ಲಿ ಪಳಗಿದರು. ಮುಂದೆ ಮಿಸ್ ಕರ್ನಾಟಕಕ್ಕೂ ಆಯ್ಕೆಯಾದರು.
ನಂತರ 'ಗಿರಗಿಟ್ಲೆ' ಸಿನಿಮಾದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಪ್ರಿಯಾಂಕ ಆ ಸಿನಿಮಾದಲ್ಲಿ ಶ್ರೀನಗರ ಕಿಟ್ಟಿಗೆ ಜೋಡಿಯಾಗಿ ಅಭಿನಯಿಸಿದರು. ಮುಂದೆ ಬಿಲ್ ಗೇಟ್ಸ್ ಸಿನಿಮಾದಲ್ಲಿ ಎರಡನೇ ನಾಯಕಿಯಾಗಿ ಕಾಣಿಸಿಕೊಂಡಿರುವ ಪ್ರಿಯಾಂಕಾಗೆ ಹೆಸರು ತಂದುಕೊಟ್ಟ ಪಾತ್ರ ಪಾರ್ವತಿ.
ಇದೀಗ ಮನಸಾರೆ ಧಾರಾವಾಹಿಯ ಮೂಲಕ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲಿರುವ ಪ್ರಿಯಾಂಕ ಅವರ ಹೊಸ ಲುಕ್ಗೆ ಪ್ರೇಕ್ಷಕರು ಕಾಯುತ್ತಿದ್ದಾರೆ.