ಕೆಜಿಎಫ್ ಸಿನಿಮಾ ಬಳಿಕ ಕನ್ನಡ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಚಿತ್ರಗಳ ಜೊತೆ ಕೋಟಿ ಕೋಟಿ ಬಜೆಟ್ ಸಿನಿಮಾಗಳು ನಿರ್ಮಾಣ ಆಗುವ ಸಂಸ್ಕೃತಿ ಹೆಚ್ಚಾಗುತ್ತಿದೆ. ಅದ್ರಲ್ಲೂ ಪರಭಾಷೆಯ ಸಿನಿಮಾಗಳಿಗೆ ಪೈಪೋಟಿ ಕೊಡುವ ಮಟ್ಟಿಗೆ ಕನ್ನಡ ಸಿನಿಮಾಗಳ ನಿರ್ಮಾಣಕ್ಕೆ ನಿರ್ಮಾಪಕರು ಮುಂದಾಗುತ್ತಿದ್ದಾರೆ.
ಇದೀಗ ಕನ್ನಡ ಸಿನಿಮಾ ಉದ್ಯಮದಲ್ಲಿ ಈವರೆಗೆ ಯಾರೂ ನಿರ್ಮಿಸದ ದೊಡ್ಡ ಬಜೆಟ್ ಚಿತ್ರವೊಂದು ನಿರ್ಮಾಣವಾಗುತ್ತಿದೆ. ಬರೋಬ್ಬರಿ 400 ಕೋಟಿ ಬಂಡವಾಳದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಮಾಡಲಾಗುತ್ತಿದೆ. ಈ ಸಿನಿಮಾದಲ್ಲಿ ನೆನಪಿರಲಿ ಪ್ರೇಮ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ.
ಈ ಸಿನಿಮಾ ಬಯೋಫಿಕ್ ಚಿತ್ರವಾಗಿದೆ. ಕರ್ನಾಟಕದ ಹೆಮ್ಮೆಯ ಯೋಧ ಫೀಲ್ಡ್ ಮಾರ್ಷಲ್ ಕಾರಿಯಪ್ಪ ಅವರ ಜೀವನಾಧಾರಿತ ಚಿತ್ರ ಈಗ ಬೆಳ್ಳಿ ತೆರೆ ಮೇಲೆ ವಿಜ್ರಂಭಿಸಲಿದೆ. ಭಾರತೀಯ ಸೇನೆಯ ಮೊದಲ ಕಮಾಂಡರ್ ಇನ್ ಚೀಫ್ ಆಗಿದ್ದವರು ಕಾರಿಯಪ್ಪ. ಕೊಡಗಿನವರಾಗಿದ್ದ ಕಾರಿಯಪ್ಪ ಮೂರು ದಶಕಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು.
1947ರ ಬಳಿಕದ ಭಾರತ ಪಾಕಿಸ್ತಾನ ಯುದ್ಧದಲ್ಲಿ ಸೇನಾ ತುಕಡಿಯನ್ನು ಮುನ್ನಡೆಸಿದ್ದರು. ಸೇನೆಯಲ್ಲಿ ಐದು ಸ್ಟಾರ್ ಪಡೆದ ಇಬ್ಬರೇ ಯೋಧರಲ್ಲಿ ಕಾರಿಯಪ್ಪನವರು ಒಬ್ಬರು. ಇಂತಹ ಮಹಾನ್ ಯೋಧನ ಪಾತ್ರದಲ್ಲಿ ಪ್ರೇಮ್ ಅಭಿನಯಿಸುತ್ತಿದ್ದಾರೆ.
ಈ ಭಾರಿ ಬಜೆಟ್‌ನ ಸಿನಿಮಾವನ್ನು ಸದ್ಯ ಪ್ರೇಮಂ ಪೂಜ್ಯಂ ಸಿನಿಮಾ ನಿರ್ದೇಶಕ ರಾಘವೇಂದ್ರ ಅವರೇ ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಈ ಸಿನಿಮಾಕ್ಕಾಗಿ ಹಲವು ಹಾಲಿವುಡ್ ತಂತ್ರಜ್ಞರು ಕೆಲಸ ಮಾಡಲಿದ್ದಾರೆ. ಸಿನಿಮಾವನ್ನು ಹಾಲಿವುಡ್ ಮಾದರಿಯಲ್ಲೇ ನಿರ್ಮಾಣ ಮಾಡಲಾಗುತ್ತದೆ.
ಸಿನಿಮಾದಲ್ಲಿ ಪಾತ್ರಧಾರಿಗಳು ಮತ್ತು ನಿರ್ದೇಶಕರನ್ನು ಹೊರತುಪಡಿಸಿ ಮಿಕ್ಕೆಲ್ಲರೂ ಹಾಲಿವುಡ್‌ನವರೇ ಆಗಿರುತ್ತಾರೆ. ಇನ್ನು, ಈ ಚಿತ್ರದಲ್ಲಿ ಸೈನ್ಯದ ದೃಶ್ಯ, ಯುದ್ಧದ ಸನ್ನಿವೇಶಗಳು ಇರಲಿವೆ. ಕರ್ನಾಟಕ, ಕಾಶ್ಮೀರ, ದೆಹಲಿ ಸೇರಿ ಹಲವು ಕಡೆಗಳಲ್ಲಿ ಸಿನಿಮಾ ಚಿತ್ರೀಕರಣ ಆಗಲಿದೆ.
ಸಿನಿಮಾವನ್ನು ಕೇದಾಂಬರಿ ಕ್ರಿಯೇಷನ್ಸ್ ಮತ್ತು ಮಂಗಳೂರಿನ ರಾಜಕುಮಾರ್ ಎಂಬುವರು ನಿರ್ಮಾಣ ಮಾಡುತ್ತಿದ್ದಾರೆ. ಕನ್ನಡ, ಹಿಂದಿ, ಇಂಗ್ಲಿಷ್ ಹಾಗೂ ಇನ್ನೂ ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿದೆ. ಸದ್ಯ ಪ್ರೇಮ್ ಪ್ರೇಮಂ ಪೂಜ್ಯಂ ಸಿನಿಮಾದ ಜಪ ಮಾಡ್ತಾ ಇದ್ದು, ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈಗ ಪ್ರೇಮ್ 400 ಕೋಟಿ ಬಜೆಟ್‌ನಲ್ಲಿ ನಿರ್ಮಾಣ ಆಗುತ್ತಿರುವ ಚಿತ್ರದ ಸಿದ್ಧತೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ.