'ಪ್ರೀಮಿಯರ್ ಪದ್ಮಿನಿ' ಚಿತ್ರದಲ್ಲಿ ಜಗ್ಗೇಶ್ ಕಾರ್ ಡ್ರೈವರ್ ಪಾತ್ರದಲ್ಲಿ ನಟಿಸಿದ್ದ ಯುವಕ ನಿಮಗೆಲ್ಲಾ ನೆನಪಿರಬಹುದು. ಧಾರಾವಾಹಿಗಳಲ್ಲಿ ನಟಿಸುತ್ತಾ ' ಗೀತಾ ಬ್ಯಾಂಗಲ್ ಸ್ಟೋರ್' ಚಿತ್ರದ ಮೂಲಕ ನಾಯಕನಾಗಿ ಬೆಳ್ಳಿ ತೆರೆಗೂ ಹೆಜ್ಜೆ ಇಟ್ಟ ಪ್ರಮೋದ್ ಈಗ ಜ್ಯೂನಿಯರ್ ದರ್ಶನ್ ಎಂದೇ ಫೇಮಸ್.
ಇತ್ತೀಚೆಗಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್, ಪ್ರಮೋದ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ' ಮತ್ತೆ ಉದ್ಭವ' ಚಿತ್ರದ ಟ್ರೇಲರ್ ಲಾಂಚ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಮೂಲತ: ಮಂಡ್ಯದವರಾದ ಪ್ರಮೋದ್ ದರ್ಶನ್ ಅವರ ಅಭಿಮಾನಿಯಂತೆ. ಶಾಲೆಗೆ ಹೋಗುವ ದಿನಗಳಲ್ಲಿ ಒಮ್ಮೆ ತಮ್ಮ ಊರಿನಲ್ಲಿ ದರ್ಶನ್ ಅವರ 'ಕರಿಯ' ಸಿನಿಮಾದ ಕಾರ್ಯಕ್ರಮ ನಡೆಯುತ್ತಿತ್ತಂತೆ. ಆಗ ದರ್ಶನ್ ಅವರನ್ನು ನೋಡಿ ನಾನು ಕೂಡಾ ಈ ರೀತಿ ಆಗಬೇಕು ಎಂದು ಕನಸು ಕಂಡಿದ್ದಂತೆ ಪ್ರಮೋದ್. ಇದೀಗ ಪ್ರಮೋದ್ ಅಭಿನಯಿಸಿರುವ ಸಿನಿಮಾ ಟ್ರೇಲರನ್ನು ಸ್ವತ: ದರ್ಶನ್ ಅವರೇ ಬಂದು ಬಿಡುಗಡೆ ಮಾಡಿ ಗುಡ್ಲಕ್ ಹೇಳಿದ್ದಾರೆ. ಕೆಲವು ದಿನಗಳ ಹಿಂದೆ ಶ್ರುತಿ ನಾಯ್ಡು ಆಹ್ವಾನದ ಮೇರೆಗೆ ದರ್ಶನ್ 'ಪ್ರೀಮಿಯರ್ ಪದ್ಮಿನಿ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಕೂಡಾ ಆಗಮಿಸಿದ್ದರು.
ಇನ್ನು 'ಮತ್ತೆ ಉದ್ಭವ' ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಮೋದ್ ಅವರನ್ನು ಜ್ಯೂನಿಯರ್ ದರ್ಶನ್ ಎಂದು ಕರೆದದ್ದು ನಾಯಕಿ ಮಿಲನ ನಾಗರಾಜ್. ಒಮ್ಮೆ ಚಿತ್ರದ ನಿರ್ದೇಶಕ ಕೋಡ್ಲು ರಾಮಕೃಷ್ಣ ಅವರೊಂದಿಗೆ ಪ್ರಮೋದ್ ಮಾತನಾಡುವಾಗ ದೂರದಿಂದ ಅವರನ್ನು ನೋಡಿದ ಮಿಲನ ನಾಗರಾಜ್ ದರ್ಶನ್ ಅವರೊಂದಿಗೆ ಕೋಡ್ಲು ರಾಮಕೃಷ್ಣ ಮಾತನಾಡುತ್ತಿದ್ದಾರೆ ಎನ್ನಿಸಿತ್ತಂತೆ. ಆ ದಿನವನ್ನು ನೆನಪಿಸಿಕೊಂಡ ಮಿಲನ ನಾಗರಾಜ್, ಪ್ರಮೋದ್ ಕೂಡಾ ದರ್ಶನ್ ಅವರಂತೆ ಹೈಟ್ ಇದ್ದಾರೆ. ನೋಡಲು ಅವರಂತೆ ಕಾಣುತ್ತಾರೆ. ಒಂದು ರೀತಿ ಪ್ರಮೋದ್ ಅವರನ್ನು ಜ್ಯೂನಿಯರ್ ದರ್ಶನ್ ಎನ್ನಬಹುದು ಎಂದಾಗ ವೇದಿಕೆಯಲ್ಲಿದ್ದ ದರ್ಶನ್ ಕೂಡಾ ಸ್ಮೈಲ್ ನೀಡಿದ್ದಾರೆ. ಇನ್ನು 'ಗೀತಾ ಬ್ಯಾಂಗಲ್ ಸ್ಟೋರ್' ಚಿತ್ರದಲ್ಲಿ ನಟಿಸಿದ ನಂತರ ಪ್ರಮೋದ್ ಡಾ. ವಿಷ್ಣುವರ್ಧನ್ ಅವರಂತೆ ಕಂಡಿದ್ದರು ಎಂದು ಬಹಳಷ್ಟು ಮಂದಿ ಹೇಳಿದ್ದರು. ‘ಗೀತಾ ಬ್ಯಾಂಗಲ್ ಸ್ಟೋರ್’ ಉತ್ತಮ ಪ್ರತಿಕ್ರಿಯೆ ಪಡೆದರೂ ಅದು ಗಲ್ಲಾ ಪೆಟ್ಟಿಗೆಯಲ್ಲಿ ಯಶಸ್ಸು ಕಾಣಲಿಲ್ಲ. 'ಮತ್ತೆ ಉದ್ಭವ' ಪ್ರಮೋದ್ಗೆ ಬ್ರೇಕ್ ನೀಡಲಿ ಎಂದು ಹಾರೈಸೋಣ.
- " class="align-text-top noRightClick twitterSection" data="">