ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರದ ಓಪನಿಂಗ್ ಅದ್ಭುತವಾಗಿದ್ದು, ಮೊದಲ ದಿನದ ಕಲೆಕ್ಷನ್ ಎಷ್ಟಾಗಿರಬಹುದು ಎಂಬ ಲೆಕ್ಕಾಚಾರ ಎಲ್ಲೆಡೆ ನಡೆಯುತ್ತಿದೆ.
ಎಲ್ಲರಿಗೂ ಗೊತ್ತಿರುವಂತೆ, ಪೊಗರು ಚಿತ್ರವು ಏಕಕಾಲಕ್ಕೆ ಮೂರು ಭಾಷೆಗಳಲ್ಲಿ, ನಾಲ್ಕು ರಾಜ್ಯಗಳ ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಈ ಪೈಕಿ ಕರ್ನಾಟಕದ ಕಲೆಕ್ಷನ್ ಮಾತ್ರ ಬಹಿರಂಗಪಡಿಸಿದ್ದಾರೆ. ಚಿತ್ರದ ನಿರ್ಮಾಪಕ ಬಿ.ಕೆ. ಗಂಗಾಧರ್ ಅವರ ಪ್ರಕಾರ, ಬರೀ ಕರ್ನಾಟಕದವೊಂದರಲ್ಲೇ ಚಿತ್ರವು ಮೊದಲ ದಿನದ ಭರ್ಜರಿ ಕಲೆಕ್ಷನ್ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದೆ. ಇದುವರೆಗೂ ಕೆಲವು ಚಿತ್ರಗಳು ಮೊದಲ ದಿನ ಆರೇಳು ಕೋಟಿ ಸಂಪಾದಿಸಿವೆ. ಆದರೆ, ಆ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿರುವ ಪೊಗರು ಮೊದಲ ದಿನ ಭರ್ಜರಿ ಕಲೆಕ್ಷನ್ ಗಳಿಸಿದೆ.
ಇದನ್ನೂ ಓದಿ: ಹೆಣ್ಮಕ್ಕಳಿಗೆ ತೊಂದರೆ ಕೊಟ್ರೆ ಹುಷಾರ್.. ‘ಸಂಹಾರಿಣಿ’ಯಾಗಿ ಬರಲಿದ್ದಾರೆ 'ಮಳೆ ಹುಡುಗಿ'
ಚಿತ್ರ ಇಷ್ಟೊಂದು ಹಣ ಸಂಪಾದಿಸಿ ದಾಖಲೆ ಮಾಡುವುದಕ್ಕೆ ಕಾರಣವೂ ಇದೆ. ಪ್ರಮುಖವಾಗಿ ಈ ಶುಕ್ರವಾರ`ಪೊಗರುಗೆ ಬೇರೆ ಯಾವುದೇ ಚಿತ್ರದ ಸ್ಪರ್ಧೆ ಇರಲಿಲ್ಲ. ಇನ್ನೂ ಕರ್ನಾಟಕದಲ್ಲಿ 500ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಿದ್ದು, ಈ ಪೈಕಿ ಬೆಂಗಳೂರಲ್ಲಿ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಬೆಂಗಳೂರಲ್ಲೇ ದಾಖಲೆಯ 750 ಪ್ರದರ್ಶನವಾಗಿರುವುದರಿಂದ ಕೋಟಿಕೋಟಿ ಹಣ ಹರಿದುಬಂದಿದೆ. ಈ ಕಲೆಕ್ಷನ್ ಶನಿವಾರ ಮತ್ತು ಭಾನುವಾರ ಸಹ ಮುಂದುವರೆಯಲಿದ್ದು, ಸೋಮವಾರದಿಂದ ಡ್ರಾಪ್ ಆಗುವ ನಿರೀಕ್ಷೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಪೊಗರು ಚಿತ್ರದ ನಿರ್ಮಾಪಕ ಬಿ.ಕೆ.ಗಂಗಾಧರ್ ಅವರೇ ತಮ್ಮ ಚಿತ್ರದ ಮೊದಲ ದಿನದ ಕಲೆಕ್ಷನ್ ಬಹಿರಂಗಪಡಿಸಿದ್ದು, ಮೊದಲ ದಿನವೇ ಚಿತ್ರ 10.05 ಕೋಟಿ ರೂ.ಗಳನ್ನು ಬಾಚಿಕೊಂಡಿದೆ ಎಂದು ಹೇಳಿದ್ದಾರೆ.