ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯ ಕಲಾವಿದರಲ್ಲಿ ಸಾಧು ಕೋಕಿಲ ಕೂಡಾ ಪ್ರಮುಖರು. ಇವರು ಕೇವಲ ಹಾಸ್ಯ ಕಲಾವಿದರಷ್ಟೇ ಅಲ್ಲ, ಸಿನಿಮಾ ನಿರ್ದೇಶನ ಹಾಗೂ ಸಂಗೀತ ನಿರ್ದೇಶನವನ್ನೂ ಮಾಡಿದ್ದಾರೆ. ಅವರ ಅನೇಕ ಸಂಗೀತ ನಿರ್ದೇಶನದ ಚಿತ್ರಗಳು ಜನಪ್ರಿಯತೆ ಪಡೆದಿವೆ. ಇದೆಲ್ಲದರ ಜೊತೆಗೆ ಸಾಧು ಕೋಕಿಲ ಹಿನ್ನೆಲೆ ಸಂಗೀತವನ್ನೂ ನೀಡುತ್ತಾರೆ.

ಕನ್ನಡದಲ್ಲಿ ತಯಾರಾದ ಮೈನಾ, ಸಂಜು ವೆಡ್ಸ್ ಗೀತಾ, ರಾಜ ಸಿಂಹ, ಪ್ರೇಮ ಬರಹ ಸಿನಿಮಾಗಳಿಗೆ ಇವರೇ ಹಿನ್ನೆಲೆ ಸಂಗೀತ ನೀಡಿದ್ದಾರೆ. ಈಗ ಸಾಧು ಕನ್ನಡದ ಮತ್ತೊಂದು ಸಿನಿಮಾಕ್ಕೆ ಹಿನ್ನೆಲೆ ಸಂಗೀತ ನೀಡುತ್ತಿದ್ದು, ಮತ್ತೆ ಗಾನಲೋಕದ ಕಡೆ ಮುಖ ಮಾಡಿದ್ದಾರೆ.

ಹೌದು, ಚಿರಂಜೀವಿ ಸರ್ಜಾ ಅಭಿನಯದ ‘ಶಿವಾರ್ಜುನ’ ಸಿನಿಮಾಕ್ಕೆ ಸಾಧು ಕೋಕಿಲ ಪುತ್ರ ಸುರಾಗ್ ಸಂಗೀತ ನೀಡುತ್ತಿದ್ದು, ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು ಸಾಧು ಕೋಕಿಲ ನಿರ್ವಹಿಸುತ್ತಿದ್ದಾರೆ. ಈ ಚಿತ್ರಕ್ಕೆ ನಿಶ್ಚಿತ್ ಕಂಬೈನ್ಸ್ ಅಡಿಯಲ್ಲಿ ಎಂ.ಜಿ.ಮಂಜುಳ ಬಂಡವಾಳ ಹಾಕುತ್ತಿದ್ದಾರೆ. ಶಿವ ತೇಜಸ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದಲ್ಲಿ ಅಮೃತ ಅಯ್ಯಂಗಾರ್, ಅಕ್ಷತಾ, ತಾರಾ, ಅವಿನಾಶ್, ಕಿಶೋರ್, ಕುರಿ ಪ್ರತಾಪ್, ದಿನೇಶ್ ಮಂಗಳೂರು, ಸಾಧು ಕೋಕಿಲ ಸೇರಿದಂತೆ ಹಲವರು ಅಭಿನಯಿಸುತ್ತಿದ್ದಾರೆ.