ಸ್ಯಾಂಡಲ್ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ ನಾಳೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದು ದೊಡ್ಡ ಗೌಡ್ರ ಮನೆಯಲ್ಲಿ 'ಜಾಗ್ವಾರ್' ಸ್ಟಾರ್ ಮದುವೆ ಸಂಭ್ರಮ ಮನೆ ಮಾಡಿದೆ. ಅಂದುಕೊಂಡಂತೆ ಎಲ್ಲಾ ಆಗಿದಿದ್ದರೆ ನಾಳೆ ಅದ್ಧೂರಿಯಾಗಿ ಲಕ್ಷಾಂತರ ಜನಗಳ ಸಮ್ಮುಖದಲ್ಲಿ ನಿಖಿಲ್ ಕುಮಾರಸ್ವಾಮಿ ಮದುವೆ ನಡೆಯಬೇಕಿತ್ತು.
ಆದರೆ ಯುವರಾಜನ ಮದುವೆಗೆ ಕೊರೋನಾ ವೈರಸ್ ಅಡ್ಡಗಾಲಿಟ್ಟಿದ್ದು ಅದ್ದೂರಿಯಾಗಿ ನಡೆಯಬೇಕಿದ್ದ ನಿಖಿಲ್ ಹಾಗೂ ರೇವತಿ ಕಲ್ಯಾಣ ಸರಳವಾಗಿ ನಡೆಯುತ್ತಿದೆ. ಇದಕ್ಕೂ ಮುನ್ನ ರೇವತಿ ಮನೆಯಲ್ಲಿ ಮದುವೆ ಎನ್ನಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಹೆಚ್ಡಿಕೆ ಮಗನ ಮದುವೆಯನ್ನು ರಾಮನಗರದ ತಮ್ಮ ತೋಟದ ಮನೆಯಲ್ಲಿ ಮಾಡುತ್ತಿದ್ದಾರೆ. ಮದುವೆ ಸರಳವಾದರೂ ಸಂಭ್ರಮಕ್ಕೆ ಮಾತ್ರ ಕೊರತೆ ಇಲ್ಲ. ನಿಖಿಲ್ ಕುಟುಂಬದಿಂದ 30 ಮಂದಿ ಹಾಗೂ ರೇವತಿ ಕುಟುಂಬದಿಂದ 30 ಮಂದಿ ಮದುವೆಗೆ ಹಾಜರಾಗಲಿದ್ದಾರೆ. ಆದರೆ ಮದುವೆಗೆ ರಾಜಕೀಯ ಗಣ್ಯರಾಗಲೀ ಮಾಧ್ಯಮಗಳಿಗಾಗಲೀ ಪ್ರವೇಶವಿಲ್ಲ ಎಂದು ಹೆಚ್ಡಿಕೆ ಮನವಿ ಮಾಡಿದ್ದಾರೆ.
ಈಗಾಗಲೇ ದೊಡ್ಡ ಗೌಡ್ರು ಮನೆಯಲ್ಲಿ ಮದುವೆ ಸಂಭ್ರಮ ಆರಂಭವಾಗಿದೆ. ಇಂದು ಜೆ.ಪಿ. ನಗರದ ಕುಮಾರಸ್ವಾಮಿ ನಿವಾಸದಲ್ಲಿ ಚಪ್ಪರದ ಶಾಸ್ತ್ರ ನೇರವೇರಿದೆ. ಮಂಗಳ ವಾದ್ಯಗಳ ಸದ್ದಿನೊಂದಿಗೆ ಚಪ್ಪರದ ಶಾಸ್ತ್ರ ಕೂಡಾ ನೇರವೇರಿದೆ. ನಾಳೆ ರಾಮನಗರದ ಕೇತಗಾನಹಳ್ಳಿ ತೋಟದ ಮನೆಯಲ್ಲಿ ನಿಖಿಲ್ - ರೇವತಿ ಕಲ್ಯಾಣ ನಡೆಯಲಿದ್ದು,ಕುಮಾರ ಸ್ವಾಮಿ ಹಾಗೂ ರೇವತಿ ಕುಟುಬದವರು ಮಾತ್ರ ಮದುವೆಯಲ್ಲಿ ಭಾಗಿಯಾಗಲಿದ್ದಾರೆ. ಇನ್ನು ಕೊರೊನಾ ಅಬ್ಬರ ತಗ್ಗಿದ ನಂತರ ಅದ್ಧೂರಿಯಾಗಿ ಆರತಕ್ಷತೆ ಮಾಡಲು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನಿರ್ಧರಿಸಿದ್ದಾರೆ.