ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಈ ವರ್ಷದ ಹಿಟ್ ಚಿತ್ರಗಳಲ್ಲೊಂದು. ಅದಾದ ನಂತರ ದರ್ಶನ್ ಅಭಿನಯದಲ್ಲೇ ವೀರಸಿಂಧೂರ ಲಕ್ಷ್ಮಣ ಎಂಬ ಇನ್ನೊಂದು ಚಿತ್ರವನ್ನು ನಿರ್ದೇಶಿಸುವುದಾಗಿ ತರುಣ್ ಘೋಷಿಸಿದ್ದರು. ಅದಕ್ಕೆ ಸಿದ್ಧತೆಗಳನ್ನೂ ಮಾಡಿಕೊಂಡಿದ್ದರು. ಆದರೆ ಈ ಚಿತ್ರ ಇನ್ನೂ ಸೆಟ್ಟೇರುವುದು ಕಷ್ಟ. ಹಾಗಾದರೆ, ನಿರ್ದೇಶಕ ತರುಣ್ ಸುಧೀರ್ ಮುಂದೇನು ಮಾಡುತ್ತಾರೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
ವೀರಸಿಂಧೂರ ಲಕ್ಷ್ಮಣ ಚಿತ್ರವನ್ನು ರಾಬರ್ಟ್ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ನಿರ್ಮಿಸುತ್ತಿದ್ದಾರೆ. ಆದರೆ, ಅವರ ಹಾಗೂ ದರ್ಶನ್ ಸಂಬಂಧ ಇದೀಗ ಅಷ್ಟಕಷ್ಟೇ. ಅವರಿಬ್ಬರು ಇನ್ನು ಒಟ್ಟಿಗೆ ಚಿತ್ರ ಮಾಡುವುದಕ್ಕೆ ಸಾಧ್ಯವೇ ಇಲ್ಲ ಎನ್ನುವಷ್ಟು ದೂರವಾಗಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಹೀಗಿರುವಾಗ, ವೀರಸಿಂಧೂರ ಲಕ್ಷ್ಮಣ ಚಿತ್ರದ ಕಥೆಯೇನು? ಎಂಬುದು ಎಲ್ಲರ ಪ್ರಶ್ನೆ. ಆದ್ರೆ ಸದ್ಯಕ್ಕೆ ಉತ್ತರವಿಲ್ಲ. ಚಿತ್ರೀಕರಣ ಶುರುವಾದರೂ ತಕ್ಷಣಕ್ಕೆ ಶುರುವಾಗುವ ಹಾಗೆ ಕಾಣುತ್ತಿಲ್ಲ.
ಏಕೆಂದರೆ, ದರ್ಶನ್ ಮೊದಲು ಕ್ರಾಂತಿ ಚಿತ್ರವನ್ನು ಮುಗಿಸಬೇಕಿದೆ. ಇದಲ್ಲದೇ ರಾಕ್ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರವೂ ಇದೆ. ಹಾಗಾಗಿ, ಇನ್ನೊಂದು ವರ್ಷ ಅವರು ಸಿಗುವುದು ಕಷ್ಟ. ಈ ಮಧ್ಯೆ, ತರುಣ್ ಸುದ್ದಿಯೇ ಇಲ್ಲ. ದರ್ಶನ್ ಮತ್ತು ಉಮಾಪತಿ ಶ್ರೀನಿವಾಸ್ ಗೌಡ ನಡುವಿನ ಜಟಾಪಟಿಯಲ್ಲೂ ಅವರು ಸುಮ್ಮನಿದ್ದರು. ಆ ನಂತರವೂ ಅವರು ಎಲ್ಲೂ ಕಾಣಿಸಿಕೊಂಡಿಲ್ಲ ಮತ್ತು ಏನೂ ಮಾತಾಡಿಲ್ಲ. ಆಗಾಗ ಸೋಷಿಯಲ್ ಮೀಡಿಯಾ ಮೂಲಕ ಗುರುಶಿಷ್ಯರು ಚಿತ್ರದ ಅಪ್ಡೇಟ್ಸ್ ಕೊಡುವುದು ಬಿಟ್ಟರೆ, ತರುಣ್ ಬೇರೆ ಯಾವ ಸುದ್ದಿಯಲ್ಲೂ ಇಲ್ಲ.
ಇದನ್ನೂ ಓದಿ: ಪುನೀತ್ ಜತೆ ಸಂತೋಷ್ ಆನಂದ್ರಾಮ್ ಮೂರನೇ ಸಿನಿಮಾ ಪಕ್ಕಾ
ಹಾಗಂತ ಅವರು ಸುಮ್ಮನೆ ಕೂರುವವರಲ್ಲ. ಹೊಸ ಚಿತ್ರದ ಸಿದ್ಧತೆಯೊಂದರಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಆ ಚಿತ್ರ ಯಾವುದು ಮತ್ತು ಯಾವಾಗ ಘೋಷಣೆಯಾಗುತ್ತದೆ ಎಂಬ ಪ್ರಶ್ನೆಗಳಿಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ.