ಸ್ಯಾಂಡಲ್ವುಡ್ನಲ್ಲಿ ಪಾಪ್ ಕಾರ್ನ್ ಮಂಕಿ ಟೈಗರ್, ಶಿವಾಜಿ ಸುರತ್ಕಲ್, ಮೌನಂ ಹೀಗೆ ನಾಲ್ಕೈದು ಕಮರ್ಷಿಯಲ್ ಸಿನಿಮಾಗಳು ಮಹಾಶಿವರಾತ್ರಿ ಹಬ್ಬಕ್ಕೆ ಅಂದರೆ 21ರಂದು ತೆರೆ ಕಾಣುತ್ತಿವೆ.
ಈ ಕಮರ್ಷಿಯಲ್ ಚಿತ್ರಗಳ ನಡುವೆ ಮಹಿಳಾ ಪ್ರಧಾನ ಕಥೆ ಆಧರಿಸಿರುವ 'ಸೀತಮ್ಮ ಬಂದಳು ಸಿರಿ ಮಲ್ಲಿಗೆ ತೊಟ್ಟು' ಎಂಬ ಕಲಾತ್ಮಕ ಚಿತ್ರ ಪ್ರೇಕ್ಷಕರ ಮುಂದೆ ಬರಲಿದೆ. ನಟಿ ಸಂಹಿತಾ ವಿನ್ಯಾ, ನಿರ್ದೇಶಕ ಅಶೋಕ್ ಕಡಬ, ರಂಗಭೂಮಿ ಕಲಾವಿದ ನಂದೀಶ್ ಕುಮಾರ್ ಹಾಗೂ ನಿರ್ಮಾಪಕ ಹನುಮಂತ ರಾಜ್ ಈ ಚಿತ್ರದ ವಿಶೇಷತೆ ಕುರಿತು ಮಾಹಿತಿ ಹಂಚಿಕೊಂಡರು. ಗಂಡ ಸತ್ತ ವಿಧವೆಯೊಬ್ಬಳು ನಿಜ ಜೀವನದಲ್ಲಿ ಹೇಗೆ ಹೋರಾಟ ಮಾಡುತ್ತಾಳೆ ಎಂಬುದರ ಕುರಿತು ಈ ಸಿನಿಮಾದಲ್ಲಿ ತೋರಿಸಲಾಗಿದೆ ಎನ್ನುತ್ತದೆ ಚಿತ್ರತಂಡ.

ಹಾಲುತುಪ್ಪ ಚಿತ್ರದಲ್ಲಿ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದ ಸಂಹಿತಾ ವಿನ್ಯಾ ಈ ಚಿತ್ರದಲ್ಲಿ ವಿಧವೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಂಗಭೂಮಿ ಕಲಾವಿದ ನಂದೀಶ್ ಕುಮಾರ್ ಪತ್ರಕರ್ತನ ಪಾತ್ರದಲ್ಲಿ ನಟಿಸಿದ್ದಾರೆ. ಈ ಹಿಂದೆ ಅಮೃತ ಘಳಿಗೆ ಸಿನಿಮಾ ನಿರ್ದೇಶಿಸಿದ್ದ ಅಶೋಕ್ ಕಡಬ ಈ ಚಿತ್ರದಲ್ಲಿ ವಿಧವೆ ಹೆಣ್ಣಿನ ಕಷ್ಟ-ಸುಖದ ಕಥೆ ಹೇಳಲಿದ್ದಾರೆ.
ಚಿತ್ರ ವೀಕ್ಷಿಸಿದ ಸೆನ್ಸಾರ್ ಮಂಡಳಿ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದೆಯಂತೆ. ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಹನುಮಂತರಾಜ್ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಹಣಕ್ಕಾಗಿ ಸಿನಿಮಾ ನಿರ್ಮಿಸಿಲ್ಲ. ಹೊಸಬರಿಗೆ ಅವಕಾಶ ಕೊಡುವ ಉದ್ದೇಶದಿಂದ ಈ ಚಿತ್ರಕ್ಕೆ ನಿರ್ಮಾಪಕನಾಗಿದ್ದೇನೆ ಎನ್ನುತ್ತಾರೆ ಹನುಮಂತರಾಜ್. 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಮಹಾಶಿವರಾತ್ರಿ ಹಬ್ಬಕ್ಕೆ ತೆರೆ ಕಾಣುತ್ತಿರುವ 'ಸೀತಮ್ಮ ಬಂದಳು ಸಿರಿ ಮಲ್ಲಿಗೆ ತೊಟ್ಟು' ಪ್ರೇಕ್ಷಕರ ಮನ ಗೆಲ್ಲುತ್ತಾ ಇಲ್ಲವೋ ಕಾದು ನೋಡಬೇಕು.