ತಮ್ಮ ಸಿನಿಮಾಗಳಲ್ಲಿ ಸದಾ ಹೊಸತನವನ್ನು ಅಳವಡಿಸಿಕೊಳ್ಳಲು ಬಹುತೇಕ ಎಲ್ಲಾ ನಿರ್ದೇಶಕರು ಬಯಸುತ್ತಾರೆ. ದಯಾಳ್ ಪದ್ಮನಾಭನ್ ಕೂಡಾ ಇದಕ್ಕೆ ಹೊರತಾಗಿಲ್ಲ. ತಮ್ಮ ಸಿನಿಮಾಗಳಲ್ಲಿ ಏನಾದರೊಂದು ಹೊಸತನ ಅಥವಾ ಸಂದೇಶವನ್ನು ಅವರು ಹೊತ್ತು ತರುತ್ತಾರೆ.
ದಯಾಳ್ ಪದ್ಮನಾಭನ್ ಇತ್ತೀಚೆಗೆ ನಿರ್ದೇಶಿಸಿರುವ ಬಹುತೇಕ ಎಲ್ಲಾ ಸಿನಿಮಾಗಳು ಪುಸ್ತಕ ಆಧಾರಿತ ಸಿನಿಮಾಗಳು. ಈ ಲಾಕ್ಡೌನ್ ಸಮಯದಲ್ಲಿ ತಾವೇ ನಿರ್ದೇಶಿಸಿದ 'ಆ ಕರಾಳ ರಾತ್ರಿ' ಸಿನಿಮಾಗೆ ಹೊಸ ಮೆರುಗು ನೀಡಿದ್ದಾರೆ ದಯಾಳ್. ರೂಪೆರ್ಟ್ ಬ್ರೂಕ್ ಎಂಬುವವರು ಬರೆದ ಕಥೆಯನ್ನು ಮೋಹನ್ ಹಬ್ಬು ನಾಟಕವಾಗಿ ಕನ್ನಡಕ್ಕೆ ಭಾಷಾಂತರ ಮಾಡಿದರು. ಸುಮಾರು 40 ನಿಮಿಷಗಳ ಈ ನಾಟಕವನ್ನು ನಿರ್ದೇಶಕ ದಯಾಳ್ ಪದ್ಮನಾಭನ್ ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಬೆಳ್ಳಿ ಪರದೆ ಮೇಲೆ ಸಿನಿಮಾ ರೂಪದಲ್ಲಿ ತೋರಿಸಿದರು. ಇದೀಗ ನಾಟಕ, ಚಿತ್ರಕಥೆ, ಸಂಭಾಷಣೆ ಒಳಗೊಂಡ 'ಆ ಕರಾಳ ರಾತ್ರಿ' ಪುಸ್ತಕವನ್ನು ದಯಾಳ್ ಪದ್ಮನಾಭನ್ , ನಟ, ಬರಹಗಾರ ನವೀನ್ಕೃಷ್ಣ ಹಾಗೂ ಮೋಹನ್ ಹಬ್ಬು ಸೇರಿ ಪುಸ್ತಕ ರೂಪದಲ್ಲಿ ಹೊರ ತರುತ್ತಿದ್ದಾರೆ.
'ಆ ಕರಾಳ ರಾತ್ರಿ' ಚಿತ್ರದಲ್ಲಿ ಅನುಪಮಾ ಗೌಡ, ರಂಗಾಯಣ ರಘು, ಜಯರಾಮ್ ಕಾರ್ತಿಕ್, ವೀಣಾ ಸುಂದರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಕೂಡಾ ದೊರೆತಿತ್ತು , ಅಲ್ಲದೆ ದಯಾಳ್ ಪದ್ಮನಾಭನ್ ಅವರಿಗೆ ಹೆಸರು ತಂದುಕೊಡ್ತು. ಈ ಚಿತ್ರಕ್ಕೆ ನವೀನ್ ಕೃಷ್ಣ ಸಂಭಾಷಣೆ ಬರೆದಿದ್ದರೆ ಚಿತ್ರಕಥೆಯನ್ನು ದಯಾಳ್ ಪದ್ಮನಾಭನ್ ಬರೆದಿದ್ದರು. ಈ ಹಿಂದೆ ಮುಂಗಾರು ಮಳೆ, ಆಪ್ತಮಿತ್ರ ಸಿನಿಮಾಗಳು ಬಿಡುಗಡೆ ಆದ ನಂತರ ಪುಸ್ತಕ ರೂಪದಲ್ಲಿ ಹೊರಬಂದಿದ್ದವು. ಆದರೆ ಒಂದು ನಾಟಕವನ್ನು ಸಿನಿಮಾ ಮಾಡಿ ನಂತರ ನಾಟಕ, ಚಿತ್ರಕಥೆ, ಸಂಭಾಷಣೆ ಆಧರಿಸಿ ಪುಸ್ತಕ ಹೊರ ತರುತ್ತಿರುವುದು ಇದೇ ಮೊದಲು.