ಕನ್ನಡ ಚಿತ್ರರಂಗದ ಯುವರತ್ನ ಪುನೀತ್ ರಾಜ್‌ಕುಮಾರ್ ಅವರ 'ನೀನೇ ರಾಜಕುಮಾರ' ಬಯೋಗ್ರಫಿ ಸಿದ್ಧವಾಗಿದೆ. ಪತ್ರಕರ್ತ ಡಾ.ಶರಣು ಹುಲ್ಲೂರು ಪುನೀತ್ ಜೀವನ ಚರಿತ್ರೆ ಪುಸ್ತಕದ ಸೃಷ್ಟಿಕರ್ತರು.
'ಸಿನಿಮಾ ರಂಗಕ್ಕೆ ಪತ್ರಕರ್ತರ ಕೊಡುಗೆ ಎಷ್ಟಿದೆಯೋ, ಸಿನಿಮಾ ರಂಗದವರಿಂದ ಪತ್ರಿಕೋದ್ಯಮಕ್ಕೂ ಅಷ್ಟೇ ಕೊಡುಗೆ ಇದೆ. ಇದೊಂದು ಕೊಡುಕೊಳ್ಳುವಿಕೆಯ ಸಂಬಂಧ. ಹಾಗಾಗಿ ಈ ರಂಗದಿಂದ ಯಾರನ್ನೇ ಕಳೆದುಕೊಂಡರೂ ನಮ್ಮವರನ್ನೇ ಕಳೆದುಕೊಂಡಷ್ಟು ಸಂಕಟ. ಪುನೀತ್ ರಾಜ್‌ಕುಮಾರ್ ನಿಧನರಾದಾಗ ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ಕಂಬನಿ ಮಿಡಿದಿದ್ದಾರೆ. ಪತ್ರಕರ್ತ ಮಿತ್ರರು ಎಷ್ಟೊಂದು ಸಂಕಟ ಪಟ್ಟಿದ್ದಾರೆಂದು ಬಲ್ಲೆ. ಸ್ಟುಡಿಯೋದಲ್ಲಿ ಕೂತ ನಿರೂಪಕ, ನಿರೂಪಕಿಯರು ಅಳುತ್ತಲೇ ಸುದ್ದಿ ಓದಿದ್ದಾರೆ. ವರದಿಗಾರರು ಭಾವುಕರಾಗಿಯೇ ವರದಿ ಮಾಡಿದ್ದಾರೆ. ಇದಕ್ಕೆ ಕಾರಣ ಅಪ್ಪು ಅವರು ನಮ್ಮೊಂದಿಗೆ ನಡೆದುಕೊಳ್ಳುತ್ತಿದ್ದ ರೀತಿ' ಎಂದು ಪತ್ರಕರ್ತ ಡಾ. ಶರಣು ಹುಲ್ಲೂರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ.
'ಪುಸ್ತಕ ರೂಪದಲ್ಲಿ ಸಲ್ಲಿಸುತ್ತಿರುವ ಗೌರವ': 'ಎಂದಿಗೂ ಅವರು ವರದಿಗಾರರ ಜೊತೆ ಮುನಿಸಿಕೊಂಡವರಲ್ಲ. ಫೋನಿಗೆ ಸಿಗದೇ ಸತಾಯಿಸಿದವರೂ ಅಲ್ಲ. ಮಿಸ್ಡ್ ಕಾಲ್ ಇದ್ದರೂ ವಾಪಸ್ ಕರೆ ಮಾಡಿ ವಿಚಾರಿಸಿಕೊಳ್ಳುತ್ತಿದ್ದರು. ಒಂದು ರೀತಿಯಲ್ಲಿ ಅವರು ನಮ್ಮವರೇ ಆಗಿದ್ದರು. ಈ ಪ್ರೀತಿ ಮತ್ತೆಂದೂ ಸಿಗದು. ಹಾಗಾಗಿ ಅವರ ಜೊತೆಗಿನ ಒಡನಾಟವನ್ನು ದಾಖಲಿಸಬೇಕು ಮತ್ತು ಈ ಮೂಲಕ ಅವರ ಜೀವನವನ್ನು ಅಕ್ಷರ ರೂಪಕ್ಕೆ ಇಳಿಸಬೇಕು ಎನ್ನುವ ಉದ್ದೇಶದಿಂದ ‘ನೀನೇ ರಾಜಕುಮಾರ’ ಹೆಸರಿನಲ್ಲಿ ಅಪ್ಪು ಅವರ ಬಯೋಗ್ರಫಿ ಬರೆಯಬೇಕಾಯಿತು. ಇದೊಂದು ರೀತಿಯಲ್ಲಿ ಸಿನಿಮಾ ಪತ್ರಕರ್ತರ ಪರವಾಗಿ ನಾನು ಪುಸ್ತಕ ರೂಪದಲ್ಲಿ ಸಲ್ಲಿಸುತ್ತಿರುವ ಗೌರವ' ಎಂದರು.
ಇಂಥದ್ದೊಂದು ಪುಸ್ತಕ ಬರೆಯಲು 2020ರ ಸೆಪ್ಟೆಂಬರ್ 2ರ ದಿನ ನನಗೆ ಪ್ರೇರಣೆಯಾಯಿತು. ನಾನು ಸುದೀಪ್ ಅವರ ‘ಕನ್ನಡ ಮಾಣಿಕ್ಯ ಕಿಚ್ಚ’ ಪುಸ್ತಕ ಬರೆದಾಗ ಅದನ್ನು ಪ್ರೀತಿಯಿಂದ ಬಿಡುಗಡೆ ಮಾಡಿದ್ದು ಪುನೀತ್ ರಾಜ್ ಕುಮಾರ್ ಅವರು. ಸುದೀಪ್ ಅವರ ಹುಟ್ಟುಹಬ್ಬದಂದು ಅವರು ಪುಸ್ತಕ ಬಿಡುಗಡೆ ಮಾಡಿದಾಗ ಖ್ಯಾತ ನಿರ್ಮಾಪಕರಾದ ಜಾಕ್ ಮಂಜು ಅವರು ಮುಂದಿನ ಪುಸ್ತಕ ಅಪ್ಪು ಅವರ ಬಗ್ಗೆ ಮಾಡಿ ಎಂದರು.
ಬಯೋಗ್ರಫಿಗೆ ಒಪ್ಪದ ಅಪ್ಪು: ಆಗ ಪುನೀತ್ ರಾಜ್‌ಕುಮಾರ್ ಅಯ್ಯೋ ನನ್ನ ಪುಸ್ತಕವಾ ಬೇಡ ಎಂದವರು ಕೊನೆಗೆ ಎಲ್ಲರ ಒತ್ತಾಯಕ್ಕೆ ಮಣಿದು ಒಪ್ಪಿಕೊಂಡರು. ಅಲ್ಲಿಂದ ನನ್ನ ಕೆಲಸವನ್ನು ಶುರು ಹಚ್ಚಿಕೊಂಡೆ. ನಂತರ ಅವರ ಭೇಟಿಗಾಗಿ ಹಲವು ಬಾರಿ ಕರೆ ಮಾಡಿದೆ. ಅವರಿಂದ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಆರು ತಿಂಗಳ ನಂತರ ಶೆರ್ಟನ್ ಹೋಟೆಲ್ನಲ್ಲಿ ನಮ್ಮಿಬ್ಬರ ಭೇಟಿ ಆಯಿತು. ಆಗ ಅವರು ನಾನು ಬೇಕು ಅಂತಾನೇ ನಿಮ್ಮ ಕರೆ ಸ್ವೀಕರಿಸಲಿಲ್ಲ. ನಾನೇನು ಸಾಧನೆ ಮಾಡಿಲ್ಲ. ಅಪ್ಪಾಜಿ ಮತ್ತು ಅಮ್ಮನ ಪುಸ್ತಕದ ಜೊತೆ ನನ್ನ ಪುಸ್ತಕ ಇಡಲು ಮನಸ್ಸು ಒಪ್ಪುತ್ತಿಲ್ಲ. ಒಂದು ಸಲ ನೀವೇ ಯೋಚಿಸಿ ಎಂದು ಹೇಳಿ ನಿರಾಸೆ ಮಾಡಿಬಿಟ್ಟರು. ಆದರೂ ನಾನು ನನ್ನ ಹಠ ಬಿಡಲಿಲ್ಲ. ನನ್ನ ಪಾಡಿಗೆ ನಾನು ಕೆಲಸ ಮಾಡುತ್ತಲೇ ಇದ್ದೆ. ದಿಢೀರ್ ಆಗಿ ಅಪ್ಪು ಎಲ್ಲರನ್ನು ಬಿಟ್ಟು ಹೊರಟೇ ಬಿಟ್ಟರು.
ಸಾವಿನ ನಂತರ ಹೊರಬಂದ ಸಾಧನೆಗಳ ಪಟ್ಟಿ: ಪುನೀತ್ ರಾಜ್ ಕುಮಾರ್ ಅವರ ನಿಧನದ ನಂತರ ಅವರ ಸಾಧನೆಗಳ ಪಟ್ಟಿ ಒಂದೊಂದೇ ಹೊರ ಬರ ತೊಡಗಿದವು. ನಾಡೇ ಕಣ್ಣೀರಿಟ್ಟಿತು. ಆಗ ಮತ್ತೆ ನನಗೆ ನೆನಪಾಗಿದ್ದು “ಅಪ್ಪಾಜಿ ಮತ್ತು ಅಮ್ಮನ ಪುಸ್ತಕದ ಜೊತೆ ನನ್ನ ಪುಸ್ತಕ ಇಡಲು ಮನಸ್ಸು ಒಪ್ಪುತ್ತಿಲ್ಲ” ಎಂದ ಅಪ್ಪುವಿನ ಮಾತು. ಅವರ ಈ ಮಾತನ್ನು ಅಭಿಮಾನಿಗಳು ಸುಳ್ಳು ಮಾಡಿದರು. ನೀವು ಅಪ್ಪ ಅಮ್ಮನಷ್ಟೇ ಸಾಧನೆಗೈದಿದ್ದೀರಾ ಎಂದು ತೋರಿಸಿದರು. ಮತ್ತೆ ನನ್ನ ಕನಸಿಗೆ ಮರುಜೀವ ಬಂತು. ಅಷ್ಟರಲ್ಲಿ ಕನ್ನಡದ ಖ್ಯಾತ ಪ್ರಕಾಶನ ಸಂಸ್ಥೆ ಜಮೀಲ್ ಸಾವಣ್ಣ ಅವರು ಪುಸ್ತಕದ ಬಗ್ಗೆ ವಿಚಾರಿಸಿದರು. ಮತ್ತೆ ಎಲ್ಲ ಸಂಗತಿಗಳನ್ನು ಒಟ್ಟಾಗಿಸಿ ಪುಸ್ತಕ ಮಾಡಿದೆ.
ಇದನ್ನೂ ಓದಿ: ಕನ್ನಡಕ್ಕೆ ಬಪ್ಪಿ ಲಹಿರಿ ಪರಿಚಯಿಸಿದ್ದು ಹಿರಿಯ ನಟ ದ್ವಾರಕೀಶ್
ಈ ಹಿಂದೆ ನನ್ನ ‘ಅಂಬರೀಶ್’ ಪುಸ್ತಕವನ್ನು ಪ್ರಕಟಿಸಿರುವ ಸಾವಣ್ಣ ಪ್ರಕಾಶನವೇ ‘ನೀನೇ ರಾಜಕುಮಾರ’ ಪುಸ್ತಕವನ್ನು ಸಹ ಪ್ರಕಟಿಸಲಿದೆ. ಖ್ಯಾತ ಬರಹಗಾರ ಜೋಗಿ ಅವರು ಈ ಪುಸ್ತಕಕ್ಕೆ ಹಿನ್ನುಡಿ ಬರೆದಿದ್ದಾರೆ. ಹಿರಿಯ ಪತ್ರಕರ್ತರಾದ ಮುರಳೀಧರ್ ಖಜಾನೆ ಅವರು ಮುನ್ನುಡಿ ಬರೆದಿದ್ದಾರೆ. ಡಾ.ಅಂಬರೀಶ್, ಡಾ.ವಿಷ್ಣುವಧರ್ನ್, ಕಿಚ್ಚ ಸುದೀಪ್ ಹಾಗೂ ಸಂಚಾರಿ ವಿಜಯ್ ಅವರ ಪುಸ್ತಕದ ನಂತರ ಸಿನಿಮಾ ರಂಗದವರ ಕುರಿತಾಗಿ ನಾನು ಬರೆದ ಮತ್ತೊಂದು ಪುಸ್ತಕ ಇದಾಗಿದೆ ಎಂದು ಶರಣು ಹುಲ್ಲೂರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಪುಸ್ತಕದ ಕುರಿತು: ಪುನೀತ್ ರಾಜ್ ಕುಮಾರ್ ಕುರಿತಾಗಿ ಬರುತ್ತಿರುವ ಮೊದಲ ಬಯೋಗ್ರಫಿ ಇದಾಗಿದೆ. ಹಾಗಂತ ಇದರಲ್ಲಿ ಬರೀ ಪುನೀತ್ ವೈಯಕ್ತಿಕ ಜೀವನ ಕುರಿತಾದ ವಿಷಯಗಳು ಮಾತ್ರವಿಲ್ಲ. ಅವರ ಬದುಕಿನ ಜೊತೆಗೆ ಸಿನಿಮಾ ಇತಿಹಾಸವಿದೆ. ಅವರ ವೃತ್ತಿ ಮತ್ತು ಖಾಸಗಿ ಜೀವನ ಕುರಿತಾದ ಅಪರೂಪದ ವಿಷಯಗಳನ್ನು ಮತ್ತು ಛಾಯಾಚಿತ್ರಗಳನ್ನು ಈ ಪುಸ್ತಕ ಒಳಗೊಂಡಿದೆ. ಬಾಲ್ಯ, ಬಾಲ್ಯದಲ್ಲಿ ನಟಿಸಿದ ಸಿನಿಮಾಗಳು ಮತ್ತು ಅರಸು ಚಿತ್ರದಿಂದ ಜೇಮ್ಸ್ ಚಿತ್ರದವರೆಗಿನ ಸಮಗ್ರ ನೋಟ ಇಲ್ಲಿದೆ. ಅವರ ಖಾಸಗಿ ಬದುಕಿನ ಅನೇಕ ಸಂಗತಿಗಳನ್ನು ಈ ಪುಸ್ತಕ ತಿಳಿಸಲಿದೆ. ಒಟ್ಟು 264 ಪುಟಗಳ ಸಮಗ್ರ ಜೀವನ ಚರಿತ್ರೆಯ ಪುಸ್ತಕ ಇದಾಗಿದ್ದು, ಒಟ್ಟು 34 ಅಧ್ಯಾಯಗಳನ್ನು ಇದು ಒಳಗೊಂಡಿದೆ. ಅತೀ ಶೀಘ್ರದಲ್ಲೇ ಪುಸ್ತಕ ಬಿಡುಗಡೆ ಆಗಲಿದೆ.