ರಾಕ್ಷಸಿ, ವೈರ ಚಿತ್ರಗಳ ಮೂಲಕ ಹೆಸರಾದ ನವರಸನ್, ಕಳೆದ ವರ್ಷ ಬಿಡುಗಡೆಯಾದ ರಾಧಿಕಾ ಕುಮಾರಸ್ವಾಮಿ ಅಭಿನಯದ 'ದಮಯಂತಿ' ಚಿತ್ರವನ್ನು ನಿರ್ಮಿಸಿ, ನಿರ್ದೇಶನ ಹಾಗೂ ವಿತರಣೆ ಜವಾಬ್ದಾರಿ ಕೂಡಾ ವಹಿಸಿಕೊಂಡು ಸೈ ಎನಿಸಿಕೊಂಡಿದ್ದರು.
ಕೊರೊನಾ ಲಾಕ್ಡೌನ್ ಸಮಯದಲ್ಲಿ ಎರಡು ಹೊಸ ಕಥೆಗಳನ್ನು ರೆಡಿ ಮಾಡಿರುವ ನವರಸನ್, ಈಗ 'ಮೈ ಮೂವಿ ಬಜಾರ್' ಎಂಬ ವಿನೂತನ್ ಆ್ಯಪ್ ಬಿಡುಗಡೆ ಮಾಡಲು ಹೊರಟಿದ್ದಾರೆ. ಸುಮಾರು 41 ದೇಶಗಳಲ್ಲಿ 18 ಭಾಷೆಗಳಲ್ಲಿ ಈ ಆ್ಯಪ್ ಲಭ್ಯವಿದೆ. ಈ ಆ್ಯಪ್ನಲ್ಲಿ ಒಂದು ಬಟನ್ ಒತ್ತುವುದರ ಮೂಲಕ ಭಾರತೀಯ ಚಿತ್ರರಂಗದ ವಿಚಾರವನ್ನು ತಿಳಿದುಕೊಳ್ಳಬಹುದು. ಈ ಆ್ಯಪ್ ಡಿಸೆಂಬರ್ನಲ್ಲಿ ಲಾಂಚ್ ಆಗಲಿದೆ.
ಈ ಆ್ಯಪ್ನಲ್ಲಿ ಸುಮಾರು 10 ಬಗೆಯ ಕಂಟೆಂಟ್ ಇರಲಿವೆಯಂತೆ. ಪ್ಲೇ ಸ್ಟೋರ್ನಲ್ಲಿ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಬೇಕಾದ ಮಾಹಿತಿ ಪಡೆಯಬಹುದು ಎನ್ನಲಾಗಿದೆ. ನಿರ್ಮಾಪಕ, ಪ್ರದರ್ಶಕ, ವಿತರಕ, ಕಲಾವಿದರು, ತಂತ್ರಜ್ಞರ ಬಗ್ಗೆ ಹಾಗೂ ಮುಂಬರುವ ಸಿನಿಮಾಗಳ ಬಗ್ಗೆ ಕೂಡಾ ಈ ಆ್ಯಪ್ನಲ್ಲಿ ಮಾಹಿತಿ ಲಭ್ಯವಿರಲಿದೆ ಎನ್ನಲಾಗಿದೆ.
ಶಿವರಾಜ್ ಕೆ.ಆರ್. ಪೇಟೆ ಅಭಿನಯದ 'ನಾನು ಮತ್ತು ಗುಂಡ' ಚಿತ್ರವನ್ನು ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ರೀಮೇಕ್ ಮಾಡಲು ನವರಸನ್ ಹಕ್ಕು ಪಡೆದಿದ್ದಾರಂತೆ. ಕೆಲವೊಂದು ಬದಲಾವಣೆಗಳೊಂದಿಗೆ ಅಲ್ಲಿನ ನೇಟಿವಿಟಿಗೆ ತಕ್ಕಂತೆ ಈ ಸಿನಿಮಾ ಮಾಡಲು ಮುಂದಾಗಿದ್ದಾರೆ ನವರಸನ್. ಇದರೊಂದಿಗೆ ಕಾಡಿನ ಹಿನ್ನೆಲೆ ಇರುವ ಸಿನಿಮಾಗಾಗಿ ಕಥೆಯನ್ನು ರೆಡಿ ಮಾಡಿದ್ದಾರಂತೆ.