ಕಾಮಿಡಿ ಕಿಲಾಡಿ ಶಿವರಾಜ್ ಕೆ ಆರ್ ಪೇಟೆ ಹಾಗೂ ಶ್ವಾನದ ನಡುವಿನ ಅಪರೂಪದ ಬಾಂಧವ್ಯ ಬಿಂಬಿಸುವ 'ನಾನು ಮತ್ತು ಗುಂಡ' ಚಲನಚಿತ್ರ ಶೀಘ್ರದಲ್ಲೇ ಪ್ರಸಾರವಾಗಲಿದೆ.
ಶಂಕರ್ (ಶಿವರಾಜ್ ಕೆಆರ್‌ಪೇಟೆ) ಆಟೋ ಚಾಲಕನಾಗಿದ್ದು, ಸಣ್ಣಪುಟ್ಟ ಸಮಸ್ಯೆಗಳಿದ್ರೂ ತನ್ನ ಪತ್ನಿಯೊಂದಿಗೆ ಜೀವಿಸುತ್ತಿರುತ್ತಾನೆ. ಬೆಳಗ್ಗೆಯಿಂದ ಕಷ್ಟಪಟ್ಟು ದುಡಿದು ಸಂಜೆಗೆ ಕುಡಿತದ ದಾಸನಾಗಿರ್ತಾನೆ ಅವನು. ಒಮ್ಮೆ ಹೀಗೆ ಕುಡಿಯುತ್ತಿರುವಾಗ ತನ್ನ ಮಾಲೀಕರಿಂದ ತಪ್ಪಿಸಿಕೊಂಡ ನಾಯಿಯೊಂದು ಈತನ ಆಟೋದಲ್ಲಿ ಸೇರಿಕೊಳ್ಳುತ್ತದೆ. ಮೊದಮೊದಲಿಗೆ ಅದನ್ನು ದೂರ ಮಾಡಲು ಪ್ರಯತ್ನಿಸಿದ್ರೂ ಅದು ಅವನ ಬೆನ್ನು ಹತ್ತುತ್ತದೆ. ಇಬ್ಬರ ನಡುವೆ ಬಾಂಧವ್ಯ ಪ್ರಾರಂಭಗೊಳ್ಳುತ್ತದೆ. ಇದನ್ನು ಒಪ್ಪದ ಆತನ ಪತ್ನಿ ಮನೆ ಬಿಟ್ಟು ಹೋಗುತ್ತಾಳೆ. ಈ ಮಧ್ಯೆ ಶಂಕರ ಪ್ರಾಣಿಗಳ ಅಂಗಾಂಗದ ಮಾಫಿಯಾಗೆ ಸಿಲುಕಿಕೊಳ್ಳುತ್ತಾನೆ.
ಈ ಮಾಫಿಯಾದಿಂದ ಗುಂಡನನ್ನು ರಕ್ಷಿಸಿಕೊಳ್ಳುತ್ತಾನೋ ಸ್ವತಃ ಶಂಕರನೇ ಸಂಕಷ್ಟಕ್ಕೆ ಒಳಗಾಗುತ್ತಾನೆಯೇ ಎನ್ನುವ ಕುತೂಹಲಕರ ಕಥೆಯನ್ನು ನಾನು ಮತ್ತು ಗುಂಡ ಹೊಂದಿದೆ. ಈ ಚಿತ್ರದಲ್ಲಿ ನಟಿಸಿದ ಶ್ವಾನ ಸಿಂಬ ತನ್ನ ನಟನೆಗೆ ತಾನೇ ಧ್ವನಿ ನೀಡಿದೆ. ಇದು ಚಲನಚಿತ್ರ ಇತಿಹಾಸದಲ್ಲಿಯೇ ಪ್ರಥಮ. ಸಂಯುಕ್ತಾ ಹೊರನಾಡು ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನದ ಈ ಚಲನಚಿತ್ರಕ್ಕೆ ಕಾರ್ತಿಕ್ ಶರ್ಮಾ ಸಂಗೀತ ನಿರ್ದೇಶನ ಮಾಡಿದ್ದಾರೆ. ರಘು ಹಾಸನ್ ನಿರ್ಮಾಪಕರಾಗಿದ್ದಾರೆ. ಇದೇ ಜೂನ್ 21ರಂದು ಭಾನುವಾರ ಸಂಜೆ 7ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ನಾನು ಮತ್ತು ಗುಂಡ ಸಿನಿಮಾ ಪ್ರಸಾರವಾಗಲಿದೆ.