ಭಾರತೀಯ ಚಿತ್ರರಂಗದಲ್ಲಿ ಬಹುತೇಕ ಎಲ್ಲಾ ಭಾಷೆಗಳಲ್ಲೂ ಹಾಡಿ ಹೆಸರು ಮಾಡಿದ ಗಾಯಕಿ ಎಂದರೆ ಕೆ.ಎಸ್. ಚಿತ್ರ. ಕನ್ನಡ ತೆಲುಗು, ತಮಿಳು, ಹಿಂದಿ, ಮಲಯಾಳಂ, ಬಂಗಾಳಿ, ಒರಿಯಾ, ಅಸ್ಸಾಮಿ ಹೀಗೆ 7 ಭಾಷೆಗಳಲ್ಲಿ ತಮ್ಮ ಸುಮಧುರ ಕಂಠದಿಂದ ಸಂಗೀತಪ್ರಿಯರನ್ನು ಸೆಳೆದ ಮಹಾನ್ ಗಾಯಕಿ ಇವರು.
ಸಂಗೀತ ನಿರ್ದೇಶಕ ಹಂಸಲೇಖ ಅವರ ಸಂಗೀತ ಸಂಯೋಜನೆಯಲ್ಲಿ ಚಿತ್ರ ಸಾಕಷ್ಟು ಹಾಡುಗಳನ್ನು ಹಾಡಿದ್ದಾರೆ. ಇದೀಗ ಹಂಸಲೇಖ ಅವರು ಕೆ.ಎಸ್. ಚಿತ್ರ ಅವರ ಗುಣಗಾನ ಮಾಡಿರುವುದಲ್ಲದೆ, ಚಿತ್ರ ನನ್ನ ತಂಗಿ ಎಂದು ಹೇಳಿದ್ದಾರೆ. ಇಂದು ಕೆ.ಎಸ್. ಚಿತ್ರ ಅವರ ಹುಟ್ಟುಹಬ್ಬವಾಗಿದ್ದು ಈ ಗಾನ ಸರಸ್ವತಿ ಬಗ್ಗೆ ಹಂಸಲೇಖ ಮುಕ್ತಕಂಠದಿಂದ ಹೊಗಳಿ ಹುಟ್ಟುಹಬ್ಬದ ಶುಭ ಕೋರಿದ್ದಾರೆ.
ಈ ಗಾನ ಕೋಗಿಲೆ ನನ್ನ ತಂಗಿ ಆಗಿರುವುದು ನನ್ನ 5 ಪುಣ್ಯಗಳಲ್ಲಿ ಒಂದು. ನಿನ್ನೆ ನನ್ನ ಮಗಳ ಹುಟ್ಟುಹಬ್ಬ, ಇಂದು ನನ್ನ ತಂಗಿ ಹುಟ್ಟುಹಬ್ಬ, ನಾಳೆ ನನ್ನ ಮಗನ ಹುಟ್ಟುಹಬ್ಬವಾಗಿರುವುದು ನಿಜಕ್ಕೂ ನನಗೆ ಬಹಳ ಸಂತೋಷ. ನಿಮ್ಮ ಜೀವನ ಉಜ್ವಲವಾಗಿರಲಿ ಎಂದು ನಾದಬ್ರಹ್ಮ ಚಿತ್ರ ಅವರನ್ನು ಹರಸಿ ಹಾರೈಸಿದ್ದಾರೆ.