ದೇವನಹಳ್ಳಿ : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ದಿ ಕ್ವಾಡ್ ಬೈ ಬಿಎಲ್‍ಆರ್ ಆವರಣದಲ್ಲಿ ಲೈವ್ ಮ್ಯೂಸಿಕ್ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಬೆಂಗಳೂರಿನ ಅತ್ಯುತ್ತಮ ಸಂಗೀತಗಾರರನ್ನ ಒಳಗೊಂಡಿರುವ ಮೋಕ್ಷ ಅಕಾಡೆಮಿ ಆಲ್ ಸ್ಟಾರ್ಸ್ ತಂಡ ನವೆಂಬರ್ 20ರಿಂದ ಸಂಗೀತ ಕಾರ್ಯಕ್ರಮಗಳು ನಡೆಸಲಿದೆ.
ಕೋವಿಡ್-19 ಕಾರಣದಿಂದ ಎಂಟು ತಿಂಗಳುಗಳಿಂದ ಕ್ವಾಡ್‍ನಲ್ಲಿ ನಿಂತು ಹೋಗಿದ್ದ ಕಾರ್ಯಕ್ರಮಗಳು ಮತ್ತೆ ಪ್ರಾರಂಭವಾಗಲಿವೆ. ದಿ ಮೋಕ್ಷ ಅಕಾಡೆಮಿ ಆಲ್ ಸ್ಟಾರ್ಸ್ ದೇಶದ ಎಲ್ಲೆಡೆ ವಿಭಿನ್ನ ರೀತಿಯ ಸಂಗೀತಗಳೊಂದಿಗೆ ಹಾಗೂ ವಿಭಿನ್ನ ಶೈಲಿಗಳೊಂದಿಗೆ ಪ್ರೇಕ್ಷಕರ ಮೇಲೆ ಮೋಡಿ ಮಾಡಿದ್ದು, ಈ ತಂಡ ನವೆಂಬರ್ 28ರಂದೂ ಪ್ರದರ್ಶನ ನೀಡಲಿದೆ.
ಬೆಂಗಳೂರಿನ ಅತ್ಯಂತ ಖ್ಯಾತಿ ಹೊಂದಿರುವ ಸಂಗೀತಗಾರರನ್ನು ಈ ಬ್ಯಾಂಡ್ ಒಳಗೊಂಡಿದೆ. ಬ್ಯಾಂಡ್ ಕಳೆದ ಮೂರು ವರ್ಷಗಳಲ್ಲಿ ದೇಶದ ವಿವಿಧೆಡೆ 30 ಕಾರ್ಯಕ್ರಮಗಳನ್ನು ನೀಡಿದ್ದು, ಇವುಗಳಲ್ಲಿ ಬಹುತೇಕ ಸ್ಥಳಗಳಿಂದ ಬ್ಯಾಂಡ್‍ಗೆ ಮತ್ತೆ ಕಾರ್ಯಕ್ರಮ ನೀಡಲು ಆಹ್ವಾನಗಳು ಬಂದಿವೆಯಂತೆ.
ದಿ ಆಲ್ ಸ್ಟಾರ್ಸ್‍ನಲ್ಲಿ ಸಂಗೀತಗಾರರಾದ ಸಂಜಯ್ ಚಂದ್ರಕಾಂತ್, ಶಾಲಿನಿ ಮೋಹನ್, ಜೋಶುವಾ ಕೋಸ್ಟ, ಅವಿನಾಶ್ ಗ್ರಬ್, ರಿಚರ್ಡ್ ಆಂಡ್ರೂ ಮತ್ತು ಜೈಮಿ ತಂಡದಲ್ಲಿದ್ದಾರೆ. ಭಾರತ ಮತ್ತು ವಿದೇಶಗಳ ಪ್ರೇಕ್ಷಕರನ್ನು ಇವರು ತಮ್ಮ ವಿಭಿನ್ನ ಸಂಗೀತಗಳ ಶೈಲಿಗಳಿಂದ ಹಿಡಿದಿಟ್ಟಿದ್ದರೆ.
ಪಾಪ್, ರಾಕ್, ಜಾಸ್ ಮತ್ತು ಬ್ಲೂಸ್ ಸೇರಿದಂತೆ ವಿವಿಧ ರೀತಿಯ ಸಂಗೀತವನ್ನು ಬ್ಯಾಂಡ್ ಸಾದರಪಡಿಸಲಿದೆ. ಅತ್ಯುತ್ತಮ ಗಾಯಕರೊಂದಿಗೆ ಬ್ಯಾಂಡ್ ಸಹಭಾಗಿತ್ವ ಕೈಗೊಳ್ಳುತ್ತದೆಯಲ್ಲದೆ, ನೇರ ಕಾರ್ಯಕ್ರಮಕ್ಕೆ ಅತ್ಯಂತ ವಿಭಿನ್ನವಾದ ಭಾವವನ್ನು ಮೂಡಿಸುತ್ತದೆ.