ದೇಶಾದ್ಯಂತ ಜೂನ್ 30 ವರೆಗೂ ಲಾಕ್ಡೌನ್ ವಿಸ್ತರಣೆಯಾಗಿದ್ದರೂ ಬಹಳಷ್ಟು ಕಡೆ ಲಾಕ್ಡೌನ್ ಸಡಿಲಿಕೆ ಆಗಿದೆ. ಜನಜೀವನ ಎಂದಿನಂತೆ ಆರಂಭವಾಗಿದೆ. ಈ ಮಧ್ಯೆ ಅನೇಕರು ಕೊರೊನಾ ಸಂಬಂಧ ಹಾಡುಗಳು, ಡ್ಯಾನ್ಸ್, ಬೀದಿನಾಟಕ, ಟೆಲಿಫಿಲ್ಮ್ಗಳಂತ ವಿಡಿಯೋಗಳನ್ನು ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟರು.
- " class="align-text-top noRightClick twitterSection" data="">
ಅಮಿತಾಬ್ ಬಚ್ಚನ್ ಅವರಿಂದ ಸ್ಫೂರ್ತಿಗೊಂಡ ಎಲ್ಲರೂ ತಮ್ಮದೇ ಪರಿಕಲ್ಪನೆಯಲ್ಲಿ ಒಂದೊಂದೇ ವಿಡಿಯೋಗಳನ್ನು ಮಾಡಲು ಆರಂಭಿಸಿದರು. ಇತ್ತೀಚೆಗೆ ಸ್ಯಾಂಡಲ್ವುಡ್ ಸಂಗೀತ ನಿರ್ದೇಶಕ, ಸಾಹಿತಿ, ನಟ ವಿ. ಮನೋಹರ್ ಕೂಡಾ 45 ನಿಮಿಷದ ಸಣ್ಣ ಸಿನಿಮಾವೊಂದನ್ನೇ ಮಾಡಿ ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. 'ಮಲ್ಲಿಗೆ ಮೂವೀಸ್' ಲಾಂಛನದಡಿ ಈ ಕಿರುಚಿತ್ರ ತಯಾರಾಗಿದೆ. ಇದೊಂದು ಸಂಗೀತಮಯ ಚಿತ್ರವಾದ ಕಾರಣ ಇದು ಹೊರಬರಲು ಇಷ್ಟು ದಿನಗಳು ಬೇಕಾಯ್ತು. ಈ ಚಿತ್ರದಲ್ಲಿ 20 ಹಾಡುಗಳಿವೆ. ಹಾಡಿನಿಂದ ಆರಂಭವಾಗಿ ಹಾಡಿನಲ್ಲೇ ಮುಗಿಯಲಿದೆ.
ನಾನೇ ಹಾಡು ಬರೆದು , ರಾಗ ಸಂಯೋಜನೆ ಮಾಡಿ ಅದಕ್ಕೆ ಸಂಗೀತ ಜೋಡಿಸಲು ನನ್ನ ಗೆಳೆಯರಿಗೆ ನೀಡಿದೆ. ಈ ಹಾಡುಗಳಿಗೆ 9 ಮಂದಿ ಪ್ರೋಗ್ರಾಮಿಂಗ್ ಮಾಡಿದ್ದಾರೆ. ನಾನು ನನ್ನ ಕೆಲಸವನ್ನು ಏಪ್ರಿಲ್ 20 ಕ್ಕೆ ಆರಂಭಿಸಿದ್ದೆ. ಸಂಗೀತಗಾರರು ಅದಕ್ಕೆ ವಾದ್ಯ ಜೋಡಣೆ ಮಾಡುವಾಗ ಸ್ವಲ್ಪ ತಡವಾಯಿತು. ಆಗ ಯಾವ ಸ್ಟುಡಿಯೋಗಳು ತೆರೆಯುವ ಹಾಗಿರಲಿಲ್ಲ. ರೆಕಾರ್ಡಿಂಗ್ ಬಂದ್ ಆಗಿತ್ತು. ಮನೆಯಲ್ಲೇ ಯಾರ ಸ್ಟುಡಿಯೋ ಇದೆಯೋ ಅಂಥವರನ್ನೇ ಹುಡುಕಿ ರೆಕಾರ್ಡಿಂಗ್ ಮಾಡಲು ಅವಲಂಬಿಸಬೇಕಾಗಿತ್ತು. ನನಗೋಸ್ಕರ ಎಲ್ಲರೂ ಚೆನ್ನಾಗಿ ಕೆಲಸ ಮಾಡಿಕೊಟ್ಟರು. ನಂತರ ಅದನ್ನೆಲ್ಲಾ ಕಲಾವಿದರಿಗೆ ವಾಟ್ಸಾಪ್ನಲ್ಲಿ ಕಳಿಸಿ ನಿಮ್ಮ ನಿಮ್ಮ ಮೊಬೈಲ್ನಲ್ಲಿ ಶೂಟ್ ಮಾಡಿ ಕಳಿಸಿ ಎಂದೆ. ಇಲ್ಲೂ ಕೂಡಾ ಕೆಲವು ತಾಂತ್ರಿಕ ದೋಷಗಳಿಂದಾಗಿ ಮತ್ತೆ ತಡವಾಯಿತು ಎಂದು ಮನೋಹರ್ ಹೇಳಿಕೊಂಡಿದ್ದಾರೆ.
ನನ್ನ ಮಾತಿಗೆ 23 ಕಲಾವಿದರು ಬೆಲೆ ಕೊಟ್ಟು ಇದರಲ್ಲಿ ಪಾತ್ರ ಮಾಡಿದ್ದಾರೆ. ಅವರಿಗೆಲ್ಲಾ ನಾನು ಚಿರಋಣಿ. 14 ಮಂದಿ ಗಾಯಕ-ಗಾಯಕಿಯರು 9 ಮಂದಿ ಸಂಗೀತಗಾರರು ಇದಕ್ಕೆ ದುಡಿದಿದ್ದಾರೆ. ಈ ಚಿತ್ರ ಇವರೆಲ್ಲರ ಶ್ರಮದ ಫಲ. ಕ್ಯಾಮರಾಮ್ಯಾನ್ ಇಲ್ಲ, ಲೈಟ್ಸ್ ಇಲ್ಲ, ಮೇಕಪ್ ಇಲ್ಲ, ಗ್ರಾಫಿಕ್ಸ್ ಇಲ್ಲ, ಸ್ಟುಡಿಯೋ ಇಲ್ಲ, ಅವರದ್ದೇ ಉಡುಪುಗಳು, ಕೇವಲ ಮೊಬೈಲ್ನಲ್ಲೇ ಚಿತ್ರೀಕರಣ ಮಾಡಿದ್ದು ಕಲಾವಿದರೆಲ್ಲಾ ಅವರವರ ಸ್ನೇಹಿತರಿಂದ, ಅಪ್ಪ-ಅಮ್ಮ, ಅಣ್ಣ-ತಮ್ಮಂದಿರ ಮೂಲಕ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿ ಕೊಟ್ಟರು. ಹಾಗಾಗಿ ಮಾಮೂಲಿ ಚಲನಚಿತ್ರಗಳ ಗುಣಮಟ್ಟ, ದೃಶ್ಯ ವೈಭವಗಳನ್ನೆಲ್ಲಾ ಇಲ್ಲಿ ನಿರೀಕ್ಷೆ ಮಾಡದೆ, ತಮಾಷೆಗೆ ನೋಡಬೇಕಷ್ಟೇ ಎಂದು ಮನೋಹರ್ ಹೇಳಿದ್ದಾರೆ.