ನಾಗಚೈತನ್ಯ ಹಾಗೂ ಸಮಂತಾ ಅಕ್ಕಿನೇನಿ ಒಟ್ಟಿಗೆ ನಟಿಸಿರುವ ಬಹುನಿರೀಕ್ಷಿತ 'ಮಜಿಲಿ' ಸಿನಿಮಾವನ್ನು ಏಪ್ರಿಲ್ನಲ್ಲಿ ಬಿಡುಗಡೆ ಮಾಡಲು ಎಲ್ಲಾ ತಯಾರಿ ನಡೆದಿದೆ. 'ನಿನ್ನು ಕೋರಿ' ಸಿನಿಮಾ ಖ್ಯಾತಿಯ ಶಿವ ನಿರ್ವಾಣ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.
ಸಾಕಷ್ಟು ಸಿನಿಮಾಗಳಿಗೆ ಸಂಗೀತ ನೀಡಿರುವ ಕೇರಳದ ಸಂಗೀತ ನಿರ್ದೇಶಕ ಗೋಪಿಸುಂದರ್ ಅವರನ್ನು 'ಮಜಿಲಿ'ಗೆ ಸಂಗೀತ ನಿರ್ದೇಶಕರಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಇತ್ತೀಚಿನ ವರದಿಗಳ ಪ್ರಕಾರ ಈ ಪ್ರಾಜೆಕ್ಟ್ನಿಂದ ಗೋಪಿ ಹೊರಹೋಗಿದ್ದಾರಂತೆ. ಕೆಲವೊಂದು ವೈಯಕ್ತಿಕ ಸಮಸ್ಯೆಗಳಿಂದ ಗೋಪಿಸುಂದರ್ ಸಿನಿಮಾದಿಂದ ಹೊರ ನಡೆದಿದ್ದಾರೆ ಎನ್ನಲಾಗುತ್ತಿದೆ. ಗೋಪಿ ಈಗಾಗಲೇ ಆಡಿಯೋ ರೆಕಾರ್ಡ್ ಮುಗಿಸಿದ್ದಾರೆ ಎಂದು ಚಿತ್ರತಂಡ ಹೇಳಿದೆ.
ಆದರೆ ಸಿನಿಮಾ ಹಿನ್ನೆಲೆ ಸಂಗೀತ ಕೆಲಸ ಇನ್ನೂ ಇರುವುದರಿಂದ ಚಿತ್ರತಂಡ ತಮನ್ ಅವರನ್ನು ಗೋಪಿ ಜಾಗಕ್ಕೆ ಕರೆತರಲು ಕೇಳಿಕೊಂಡಿದೆ. ಗೋಪಿ ಸುಂದರ್ NOC (No Objection Certificate) ನೀಡುತ್ತಿದ್ದಂತೆ ತಮನ್ ಸಂಗೀತ ಕಾರ್ಯವನ್ನು ಆರಂಭಿಸುವುದಾಗಿ ತಿಳಿದುಬಂದಿದೆ. ಸಿನಿಮಾ ಏಪ್ರಿಲ್ 5ರಂದು ಬಿಡುಗಡೆಯಾಗಲಿದ್ದು, ಅಷ್ಟರಲ್ಲಿ ಎಲ್ಲಾ ಕೆಲಸಗಳನ್ನು ಮುಗಿಸುವುದಾಗಿ ತಮನ್ ಭರವಸೆ ನೀಡಿದ್ದಾರಂತೆ.