ಕನ್ನಡದ ಹಲವಾರು ಸಿನಿಮಾ, ಕಿರುತೆರೆ, ರಂಗಭೂಮಿಯಲ್ಲಿ ಅಭಿನಯಿಸಿರುವ ಅಜಯ್ ರಾಜ್ ಈಗ ಏಕ ಎಂಬ ಪಾತ್ರದಲ್ಲಿ (ಏಕಲವ್ಯ ಪೂರ್ಣ ಹೆಸರು) ‘ಮುಂದಿನ ನಿಲ್ದಾಣ’ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇವರು ನಾಯಕ ಪ್ರವೀಣ್ ತೇಜ್ ಸ್ನೇಹಿತನಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದ ಪೋಸ್ಟರ್ ಒಂದರಲ್ಲಿ ಅಜಯ್ ರಾಜ್, ಪ್ರವೀಣ್ ತೇಜ್ ಹಾಗೂ ರಾಧಿಕಾ ನಾರಾಯಣ್ ಮೂವರೂ ಕಾಫಿಶಾಪ್‌ನಲ್ಲಿ ಒಟ್ಟಾಗಿ ಕುಳಿತು ಆತ್ಮೀಯ ಕ್ಷಣಗಳನ್ನು ಹಂಚಿಕೊಳ್ಳುತ್ತಿರುವ ದೃಶ್ಯ ಗಮನ ಸೆಳೆಯುತ್ತಿದೆ. ನಾಯಕ ನಟನ ಪ್ರಾಣ ಸ್ನೇಹಿತ ಅಂದ ಮೇಲೆ, ಈ ಚಿತ್ರದಲ್ಲಿ ಆ ಪಾತ್ರಕ್ಕಿರುವ ಪ್ರಾಮುಖ್ಯತೆಯನ್ನು ಬಿಡಿಸಿ ಹೇಳಬೇಕಾಗಿಲ್ಲ. ಅಂತಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಅಜಯ್ ರಾಜ್, ತಮ್ಮ 5ನೇ ವರ್ಷದಲ್ಲೇ ಬಾಲ ನಟರಾಗಿ ತೆರೆಯ ಮೇಲೆ ಕಾಣಿಸಿಕೊಂಡಿದ್ದರು. ಗಿರೀಶ್ ಕಾಸರವಳ್ಳಿ ಅವರ ಕ್ರೌರ್ಯ, ಕೂರ್ಮಾವತಾರ ಮೊದಲಾದ ಚಿತ್ರಗಳಿಂದ ರಾಜ್ಯ, ರಾಷ್ಟ್ರಪ್ರಶಸ್ತಿಗಳನ್ನು ಬಾಚಿಕೊಂಡ ಹಲವಾರು ಚಿತ್ರಗಳಲ್ಲಿ ಅವರು ಬಾಲನಟರಾಗಿದ್ದು ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ.

ಟಿ.ಎನ್. ಸೀತಾರಾಂ ನಿರ್ದೇಶನದ ಮುಕ್ತ ಧಾರಾವಾಹಿಯಲ್ಲಿ ನಂಜುಂಡನಾಗಿ ನಟಿಸಿದ್ದ ಅವರು ಮನೆ ಮಾತಾದದ್ದು ಮಾತ್ರವಲ್ಲದೇ ಆ ಹೆಸರಿನಲ್ಲೇ ಕನ್ನಡಿಗರೆಲ್ಲರಿಗೂ ಚಿರಪರಿಚಿತರು. ನಟ ರಮೇಶ್ ಅರವಿಂದ್ ಅವರು ತಮಿಳು ಭಾಷೆಯಲ್ಲಿ ನಿರ್ದೇಶಿಸಿರುವ 'ಉತ್ತಮ ವಿಲನ್' ಸಿನಿಮಾದಲ್ಲಿ ಅವರು ಮೇರು ನಟ ಕಮಲ್ ಹಾಸನ್ ಜೊತೆಯಲ್ಲೂ ತೆರೆ ಮೇಲೆ ಕಾಣಿಸಿಕೊಂಡರು. ಅದರ ಜೊತೆಗೆ ಮತ್ತಷ್ಟು ತಮಿಳು ಚಿತ್ರಗಳಲ್ಲಿ ನಟಿಸಿ ಅಲ್ಲಿ ಕನ್ನಡದ ಸೊಗಡನ್ನು ತೋರಿಸಿಕೊಟ್ಟರು. ಸದ್ಯಕ್ಕೆ ‘ಮುಂದಿನ ನಿಲ್ದಾಣ’ ಸಿನಿಮಾ ಬಿಡುಗಡೆಗೆ ಅಜಯ್ ಕಾಯುತ್ತಿದ್ದಾರೆ. ಕೋಸ್ಟಲ್ ಬ್ರಿಡ್ಜ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ ಈ ಚಿತ್ರವನ್ನು ವಿನಯ್ ಭಾರದ್ವಾಜ್ ನಿರ್ದೇಶಿಸಿದ್ದಾರೆ. ಲಕ್ಷ ಲಕ್ಷ ಕೇಳುಗರ ಮನಸೂರೆಗೊಂಡ 'ಮನಸೇ ಮಾಯ' ಎಂಬ ಹಾಡು, ಹಾಗೂ ವಿಭಿನ್ನ ಮಾದರಿಯ ಪೋಸ್ಟರ್‌ಗಳಿಂದ ತೀವ್ರ ಕುತೂಹಲ ಕೆರಳಿಸುತ್ತಿರುವ ಸಿನಿಮಾ ನವೆಂಬರ್ ಮೊದಲ ವಾರ ತೆರೆ ಕಾಣಲಿದೆ.