ಮಾಜಿ ಡಾನ್ ದಿವಂಗತ ಮುತ್ತಪ್ಪ ರೈ ಜೀವನವನ್ನು ಆಧರಿಸಿ ಡೆಡ್ಲಿ ಸೋಮ ಸಿನಿಮಾ ಖ್ಯಾತಿಯ ನಿರ್ದೇಶಕ ರವಿ ಶ್ರೀವತ್ಸ 'MR' ಎಂಬ ಸಿನಿಮಾ ಅನೌನ್ಸ್ ಮಾಡಿ ಚಿತ್ರದ ಮುಹೂರ್ತ ಮಾಡಿ ಮುಗಿಸಿದ್ರು. ಇದೀಗ ಮುತ್ತಪ್ಪ ರೈ ಬಯೋಪಿಕ್ ಸಿನಿಮಾ ಮಾಡಬಾರದು ಅಂತಾ ಮುತ್ತಪ್ಪ ರೈ ಕುಟುಂಬ ಹಾಗೂ ಜಯ ಕರ್ನಾಟಕ ಸಂಘದ ಅಧ್ಯಕ್ಷ ಬಿ.ಎನ್.ಜಗದೀಶ್ ಮತ್ತು ಮುತ್ತಪ್ಪ ರೈ ಆಪ್ತರಾಗಿರುವ ನಿರ್ಮಾಪಕ ಪದ್ಮನಾಭ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಮುತ್ತಪ್ಪ ರೈ ಆಪ್ತರಾಗಿರುವ ಮತ್ತು ಕಾಲೇಜ್ ಕುಮಾರ್ ಸಿನಿಮಾ ನಿರ್ಮಾಪಕ ಪದ್ಮನಾಭ್, ನಿರ್ದೇಶಕ ರವಿ ಶ್ರೀವತ್ಸ ಮುತ್ತಪ್ಪ ರೈ ಸಿನಿಮಾ ಮಾಡಬೇಕಾದರೆ ಮೊದಲು ರೈ ಕುಟುಂಬದ ಅನುಮತಿ ಪಡೆಯಬೇಕು ಅಂತಾ ಹೇಳಿದ್ದಾರೆ. ಮತ್ತೊಂದು ಕಡೆ ಮುತ್ತಪ್ಪ ರೈ ಕೂಡ ಸಾಯುವ ಮುನ್ನ ನನ್ನ ಬಗ್ಗೆ ಸಿನಿಮಾ ಮಾಡಬೇಕಾದರೆ ನನ್ನ ಮಕ್ಕಳ ಅನುಮತಿ ಪಡೆಯಬೇಕು ಎಂಬ ವಿಲ್ ಮಾಡಿದ್ದರು.
ಇದನ್ನೂ ಓದಿ : ಥಿಯೇಟರ್ಗೆ ಬಂದ ಶಕೀಲಾ: ನೋಡಿದ ಪ್ರೇಕ್ಷಕರು ಏನಂದ್ರು?
ಹೀಗೆ ಇರಬೇಕಾದ್ರೆ ನಿರ್ದೇಶಕ ರವಿ ಶ್ರೀವತ್ಸ ಮುತ್ತಪ್ಪ ರೈ ಕುಟುಂಬದ ಅನುಮತಿ ಪಡೆದಿಲ್ಲ. ಹಾಗೇನಾದರೂ ಸಿನಿಮಾ ಮಾಡೋದಿಕ್ಕೆ ಹೋದರೆ ನಾವು ಕಾನೂನಾತ್ಮಕ ಹೋರಾಟ ಮಾಡುತ್ತೇವೆ ಅಂತಾ ಎಂಆರ್ ಸಿನಿಮಾ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ಕಿವಿಮಾತು ಹೇಳಿದ್ದಾರೆ.
ಇನ್ನು ಈ ಹಿಂದಯೇ ಮುತ್ತಪ್ಪ ರೈ ಸಿನಿಮಾವನ್ನು ಮಾಡುವುದಾಗಿ ಅನೌನ್ಸ್ ಮಾಡಿದ್ದೆವು. ಮೊದಲು ಈ ಚಿತ್ರವನ್ನು ಆರ್‌ಜಿವಿ ಮಾಡುವುದು ಎಂದಾಗಿತ್ತು. ಆದರೆ ಅವರು ಈ ಪ್ರಾಜೆಕ್ಟ್‌ನಿಂದ ಹೊರ ಹೋದ ಮೇಲೆ ನಾವು ನಮ್ಮದೇ ಬ್ಯಾನರ್‌ನಲ್ಲಿ ಮಾಡುವುದಾಗಿ ಹೇಳಿದ್ದಾರೆ. ಮುತ್ತಪ್ಪ ರೈ ಬಗ್ಗೆ ಸಿನಿಮಾ ಮಾಡುವುದಕ್ಕಾಗಲಿ, ಪುಸ್ತಕ ಬರೆಯುವುದಕ್ಕಾಗಲಿ ಕುಟುಂಬದ ವತಿಯಿಂದ ಅನುಮತಿ ಪಡೆಯಬೇಕು. ಮುಂದಿನ ದಿನಗಳಲ್ಲಿ ಮುತ್ತಪ್ಪ ರೈ ಮಕ್ಕಳು ಸಿನಿಮಾ ಮಾಡೋದಿಕ್ಕೆ ಅನುಮತಿ ನೀಡಿದ್ರೆ ರವಿ ಶ್ರೀವತ್ಸ ಕಥೆ ಕೇಳಿ ಅವ್ರ ಕೈಯಲ್ಲಿ ಸಿನಿಮಾ ನಿರ್ದೇಶನ ಮಾಡೋದಿಕ್ಕೆ ಅವಕಾಶವಿದೆ ಅಂತಾ ನಿರ್ಮಾಪಕ ಪದ್ಮನಾಭ್ ಹೇಳಿದ್ದಾರೆ.