ಮಹಾತ್ಮ ಗಾಂಧೀಜಿ ಜೀವನ ಚರಿತ್ರೆಯನ್ನ ಈಗಾಗಲೇ ಬೇರೆ, ಬೇರೆ ಕಥೆ ರೂಪದಲ್ಲಿ ಸಿನಿಮಾಗಳನ್ನು ಮಾಡಲಾಗಿದೆ. ಕನ್ನಡ ಚಿತ್ರರಂಗದಲ್ಲಿ ಗಾಂಧೀಜಿಯವರ ಬಾಲ್ಯ ಬೆಳ್ಳಿ ತೆರೆ ಮೇಲೆ ರಾರಾಜಿಸಲು ರೆಡಿಯಾಗಿದೆ.
ಅಕ್ಟೋಬರ್ 1 ರಿಂದ ಸರ್ಕಾರ ಶೇ.100ರಷ್ಟು ಆಸನ ಭರ್ತಿಗೆ ಅವಕಾಶ ನೀಡಿದೆ. ಹೀಗಾಗಿ ಕಳೆದ ಒಂದೂವರೆ ವರ್ಷದಿಂದ ಡಬ್ಬದಲ್ಲೇ ಕುಳಿತಿದ್ದ ಸಿನಿಮಾಗಳು ಬಿಡುಗಡೆಗೆ ತುದಿಗಾಲಿನಲ್ಲಿ ನಿಂತಿವೆ. ಈಗ 9 ಬಾರಿ ನ್ಯಾಷನಲ್ ಅವಾರ್ಡ್ ಮುಡಿಗೇರಿಸಿಕೊಂಡಿರುವ ನಿರ್ದೇಶಕ ಪಿ.ಶೇಷಾದ್ರಿ ನಿರ್ದೇಶನದ 'ಮೋಹನದಾಸ' ಸಿನಿಮಾ ಕೂಡ ಒಂದು.
![ಮೋಹನದಾಸ ಸಿನಿಮಾ](https://etvbharatimages.akamaized.net/etvbharat/prod-images/kn-bng-02-mahatmagandhi-childhood-in-movie-kannada-7204735_27092021181954_2709f_1632746994_805.jpeg)
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಬಾಲ್ಯವನ್ನು ಬೆಳ್ಳಿತೆರೆ ಮೇಲೆ ತೋರಿಸಲು ನಿರ್ದೇಶಕ ಪಿ.ಶೇಷಾದ್ರಿ ಸಜ್ಜಾಗಿದ್ದಾರೆ. ಮೋಹನದಾಸ ಹೆಸರಲ್ಲಿ ಸಿನಿಮಾ ಮಾಡಿದ್ದಾರೆ. ಗಾಂಧೀಜಿಯವರು ಮಹಾತ್ಮರಾದ ಕಥೆಯನ್ನು ಕೆಲವರು ಹಲವು ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಆದರೆ, ಗಾಂಧೀಜಿಯವರ ಬಾಲ್ಯದ ಕಥೆಯನ್ನು ಪುಸ್ತಕಗಳಲ್ಲಿ ದಾಖಲಿಸಿರೋದು, ಬಿಟ್ಟರೆ ಸಿನಿಮಾ ರೂಪದಲ್ಲಿ ತೆರೆಗೆ ತಂದಿಲ್ಲ. ಇದೇ ಮೊದಲ ಬಾರಿಗೆ ಕನ್ನಡ, ಹಿಂದಿ, ಇಂಗ್ಲೀಷ್, ಭಾಷೆಯಲ್ಲಿ ಸಿನಿಮಾ ನಿರ್ಮಾಣ ಮಾಡಲಾಗಿದೆ.
ಏಳು ವರ್ಷದಿಂದ ಹದಿನಾಲ್ಕು ವರ್ಷದ ವರೆಗೆ ಗಾಂಧೀಜೀಯವರ ಬಾಲ್ಯದ ಕಥೆಯನ್ನು ಒಂದು ಗಂಟೆ ಅವಧಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಸಂಚಾರಿ ಥಿಯೇಟರ್ನಲ್ಲಿ ಪಳಗುತ್ತಿರುವ ಸಮರ್ಥ್ ಮೋಹನದಾಸ್ 14 ವರ್ಷದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. 7 ವರ್ಷದ ಮೋಹನ್ ದಾಸ್ ಪಾತ್ರದಲ್ಲಿ ಪರಮ್ ಸ್ವಾಮಿ ಮಿಂಚಿದ್ದಾರೆ. ಮೋಹನ್ ದಾಸ್ ತಾಯಿ ಪುಥಳಿಬಾಯಿಯಾಗಿ ನಟಿ ಶೃತಿ, ತಂದೆ ಕರಮ್ ಚಂದ್ ಗಾಂಧಿಯಾಗಿ ಅನಂತ್ ಮಹಾದೇವನ್ ಅಭಿನಯಿಸಿದ್ದಾರೆ. ದತ್ತಣ್ಣ ಬಯೋಸ್ಕೋಪ್ ವಾಲಾನಾ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ.
ಗುಜರಾತ್ ಪೋರ ಬಂದರಿನ ಮನೆ ಹಾಗೂ ರಾಜ್ಕೋಟ್ನ ಮನೆಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಜೊತೆಗೆ ಅವರು ಶಿಕ್ಷಣ ಕಲಿತ ಆಲ್ ಫ್ರೆಡ್ ಹೈಸ್ಕೂಲ್ನಲ್ಲೂ ಶೂಟಿಂಗ್ ಮಾಡಿದ್ದಾರೆ. ಬೆಂಗಳೂರಿನಲ್ಲೂ ಚಿತ್ರೀಕರಣ ನಡೆದಿದ್ದು, ಸ್ವಾತಂತ್ರ್ಯ ಪೂರ್ವದ ಚಿತ್ರಣ ಕಟ್ಟಿಕೊಡಲು ಗ್ರಾಫಿಕ್ಸ್ ಮೊರೆ ಹೋಗಿದ್ದಾರೆ.
ಮಹಾತ್ಮ ಗಾಂಧೀಜಿಯವರ ಬಾಲ್ಯದ ಕಥೆಯನ್ನು ಬೆಳ್ಳಿತೆರೆ ಮೇಲೆ ಕಟ್ಟಿಕೊಡಬೇಕು ಎನ್ನುವುದು ನಿರ್ದೇಶಕ ಪಿ.ಶೇಷಾದ್ರಿಯವರ ಕನಸಾಗಿತ್ತು, ಅದು ಕೊನೆಗೂ ಈಡೇರಿದೆ. ಈ ಚಿತ್ರಕ್ಕೆಪ್ರವೀಣ್ ಗೋಡಖಿಂಡಿ ಸಂಗೀತ ನೀಡಿದ್ದಾರೆ. ಭಾಸ್ಕರ್ ಛಾಯಾಗ್ರಹಣವಿದ್ದು, ಕೆಂಪರಾಜು ಸಂಕಲನ ಮಾಡಿದ್ದಾರೆ. ಮಿತ್ರ ಚಿತ್ರದ ಅಡಿ 15 ಮಂದಿ ನಿರ್ಮಾಪಕರು ಈ ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ.
ಇದೇ ಅಕ್ಟೋಬರ್ 1ರಂದು ಮೋಹನದಾಸ ಸಿನಿಮಾವ ಬಿಡುಗಡೆ ಆಗುತ್ತಿದೆ. ವಿತರಕ ಮಾರ್ಕ್ಸ್ ಸುರೇಶ್ ಈ ಸಿನಿಮಾವನ್ನ ರಾಜ್ಯಾದ್ಯಂತ ವಿತರಣೆ ಮಾಡುತ್ತಿದ್ದಾರೆ.