ಕೊರೊನಾ ವೈರಸ್ ಭೀತಿ ಹಿನ್ನೆಲೆ ದೇಶಾದ್ಯಂತ ಲಾಕ್ಡೌನ್ ಇದ್ದ ಕಾರಣ ಕೆಲಸ ಇಲ್ಲದೆ, ಸಂಪಾದನೆ ಇಲ್ಲದೆ ಕಷ್ಟಪಡುತ್ತಿದ್ದ ಸಿನಿ ಕಾರ್ಮಿಕರಿಗೆ ಚಿತ್ರರಂಗದ ಗಣ್ಯರೇ ಸಹಾಯ ಮಾಡುತ್ತಾ ಬಂದಿದ್ದಾರೆ. ಇದೀಗ ವಿಧಾನಪರಿಷತ್ ಸದಸ್ಯ ಟಿ.ಎ. ಶರವಣ ಕೂಡಾ ಸಿನಿ ಕಾರ್ಮಿಕರ ನೆರವಿಗೆ ನಿಂತಿದ್ಧಾರೆ.
ಅಕ್ಷಯ ತೃತೀಯ ದಿನದಂದು ಸುಮಾರು 500 ಸಿನಿಕಾರ್ಮಿಕರಿಗೆ ಕಿಟ್ ವಿತರಿಸಿದ್ದ ಶರವಣ ಇಂದು ಮತ್ತೆ 1550 ಸಿನಿ ಕಾರ್ಮಿಕರಿಗೆ ದಿನಸಿ ಕಿಟ್ ನೀಡಿ ಮಾನವೀಯತೆ ಮೆರೆದಿದ್ದಾರೆ. ಶರವಣ ಅವರ ಈ ಕಾರ್ಯಕ್ಕೆ ಸ್ಯಾಂಡಲ್ವುಡ್ ನಟಿಯರಾದ ರಾಗಿಣಿ ದ್ವಿವೇದಿ, ರೂಪಿಕಾ, ನಟಿ ನಿರ್ದೇಶಕಿ ರೂಪಾ ಅಯ್ಯರ್ ಹಾಗೂ ನಟ, ಸಂಭಾಷಣೆಕಾರ ಮಳವಳ್ಳಿ ಸಾಯಿಕೃಷ್ಣ ಸಾಥ್ ನೀಡಿದ್ದಾರೆ. ರೂಪಾ ಅಯ್ಯರ್ ಹಾಗೂ ಮಳವಳ್ಳಿ ಸಾಯಿಕೃಷ್ಣ ಅವರ ಮನವಿಗೆ ಸ್ಪಂದಿಸಿ ಶರವಣ ಸಂಕಷ್ಟದಲ್ಲಿದ್ದ ಚಿತ್ರರಂಗದ ಕಾರ್ಮಿಕರಿಗೆ ನೆರವು ನೀಡಿದ್ದಾರೆ. ರಾಜಾಜಿನಗರದ ನವರಂಗ್ ಚಿತ್ರಮಂದಿರದಲ್ಲಿ ಇಂದು ಬೆಳಗ್ಗೆ ನಟಿ ರಾಗಿಣಿ, ರೂಪಾ ಅಯ್ಯರ್, ರೂಪಿಕಾ, ಮಳವಳ್ಳಿ ಸಾಯಿಕೃಷ್ಣ , ಪೋಷಕ ನಟಿ ಶಶಿಕಲಾ ಮತ್ತು ಶರವಣ ಅವರೇ ಮುಂದೆ ನಿಂತು ಚಿತ್ರರಂಗದ ಕಾರ್ಮಿಕರಿಗೆ ಆಹಾರ ಪದಾರ್ಥಗಳನ್ನು ವಿತರಿಸಿದ್ಧಾರೆ.