ಚಿತ್ರಮಂದಿರಗಳು ತೆರೆಯುತ್ತಿದ್ದಂತೆ ಬಿಡುಗಡೆಯಾಗಲು ಅನೇಕ ಸಿನಿಮಾಗಳು ಕಾದು ನಿಂತಿದ್ದವು. ಆದರೆ ಕೊರೊನಾ ಇನ್ನೂ ಹತೋಟಿಗೆ ಬಾರದ ಕಾರಣ ಜನರು ಚಿತ್ರಮಂದಿರಗಳತ್ತ ಸುಳಿಯುತ್ತಿಲ್ಲ. ಹಾಗಾಗಿ ಹೊಸ ಚಿತ್ರಗಳ ಬಿಡುಗಡೆಯನ್ನು ನಿರ್ಮಾಪಕರು ಮುಂದೂಡಿದ್ದಾರೆ. ಈ ನಡುವೆ ಮಂಸೋರೆ ನಿರ್ದೇಶನದ 'ಆಕ್ಟ್ 1978' ಇದೇ ತಿಂಗಳು ಬಿಡುಗಡೆಯಾಗುತ್ತಿದೆ.
ಮಂಸೋರೆ ತಮ್ಮ ಸಿನಿಮಾವನ್ನು ನವೆಂಬರ್ 20 ರಂದು ಬಿಡುಗಡೆ ಮಾಡುವ ಧೈರ್ಯ ಮಾಡಿದ್ದಾರೆ. ಸಿಂಗಲ್ ಸ್ಕ್ರೀನ್ಗಳಲ್ಲಿ ಇನ್ನೂ ಪೂರ್ಣಪ್ರಮಾಣದಲ್ಲಿ ಚಿತ್ರಪ್ರದರ್ಶನ ಪ್ರಾರಂಭವಾಗದ ಕಾರಣ, ಹೆಚ್ಚಾಗಿ ಮಲ್ಟಿಪ್ಲೆಕ್ಸ್ಗಳಲ್ಲಿ ಚಿತ್ರಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಪಿವಿಆರ್, ಐನಾಕ್ಸ್, ಗೋಪಾಲನ್ ಮಾಲ್, ಸಿನಿಪೊಲಿಸ್, ಬಿಗ್ ಸಿನಿಮಾಸ್ ಮಲ್ಟಿಪ್ಲೆಕ್ಸ್ಗಳಲ್ಲಿ 'ಆಕ್ಟ್ 1978' ಬಿಡುಗಡೆಯಾಗುತ್ತಿದೆ. ಈ ಮೂಲಕ ಲಾಕ್‍ಡೌನ್ ನಂತರ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿರುವ ದಕ್ಷಿಣ ಭಾರತದ ಮೊದಲ ಹೊಸ ಸಿನಿಮಾ ಎಂಬ ಹೆಗ್ಗಳಿಕೆಗೆ 'ಆಕ್ಟ್ 1978' ಪಾತ್ರವಾಗಿದೆ.
ಟಿ.ಕೆ. ದಯಾನಂದ್ 'ಆಕ್ಟ್ 1978' ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಸಾಮಾಜಿಕ ಹೋರಾಟದ ಕಥೆ ಇರುವ ಚಿತ್ರದಲ್ಲಿ ಯಜ್ಞಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಯಜ್ಞಾ ಶೆಟ್ಟಿ ಗರ್ಭಿಣಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪೋಸ್ಟರ್ ಕುತೂಹಲ ಕೆರಳಿಸಿತ್ತು. ಇತ್ತೀಚೆಗಷ್ಟೇ 'ಪವರ್ ಸ್ಟಾರ್' ಪುನೀತ್ ರಾಜಕುಮಾರ್ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದರು. ಚಿತ್ರ ಗೆಲ್ಲುವ ಭರವಸೆಯನ್ನು ಚಿತ್ರತಂಡ ವ್ಯಕ್ತಪಡಿಸಿದೆ. ಬಿ. ಸುರೇಶ್, ಪ್ರಮೋದ್ ಶೆಟ್ಟಿ, ಶ್ರುತಿ, ದೊಡ್ಡಣ್ಣ, ಕೃಷ್ಣ ಹೆಬ್ಬಾಳೆ, ಅಚ್ಯುತ್ ಕುಮಾರ್ ಹಾಗೂ ಇನ್ನಿತರರು ಸಿನಿಮಾದಲ್ಲಿ ನಟಿಸಿದ್ದಾರೆ.