ವಿಭಿನ್ನ ಕಥಾ ಹಂದರ ಹೊಂದಿದ್ದ ಮಂಗಳ ಗೌರಿ ಮದುವೆ ಧಾರಾವಾಹಿಯು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿ, ಕಿರುತೆರೆ ವೀಕ್ಷಕರ ಮನಸೆಳೆಯುವಲ್ಲಿ ಯಶಸ್ವಿಯಾಗಿತ್ತು.
ಪುಟ್ಟ ಗೌರಿ ಮದುವೆ ಧಾರಾವಾಹಿಯ ಮುಂದುವರಿದ ಭಾಗವಾಗಿರುವ ಮಂಗಳ ಗೌರಿ ಮದುವೆಯು ಉತ್ತಮ ಟಿಆರ್‌ಪಿಯನ್ನು ಕೂಡ ಹೊಂದಿತ್ತು. ಇದರ ನಡುವೆ ಇದೀಗ ಈ ಧಾರಾವಾಹಿಯು ಪರಭಾಷೆಗೆ ರಿಮೇಕ್ ಆಗುತ್ತಿರುವುದು ಕನ್ನಡ ಕಿರುತೆರೆ ವೀಕ್ಷಕರಿಗೆ ಸಂತಸ ತಂದಿದೆ. ಸಿಲು ಒರ್ ಕಾದಲ್ ಎಂಬ ಹೆಸರಿನಲ್ಲಿ ಇದು ತಮಿಳು ಭಾಷೆಯಲ್ಲಿ ಪ್ರಸಾರ ಕಾಣಲಿದೆ.
ಮಂಗಳ ಗೌರಿಯ ಕಥಾ ಹಂದರವೇನು?
ನಾಯಕ ಐಪಿಎಸ್ ಅಧಿಕಾರಿ ರಾಜೀವ, ನಾಯಕಿ ಮಂಗಳಗೌರಿಯನ್ನು ಮದುವೆಯಾಗುತ್ತಾನೆ. ಅದು ಕೂಡ ಆಕಸ್ಮಿಕವಾಗಿ. ಈ ವಿಚಾರ ರಾಜೀವನ ಮನೆಯವರಿಗೆ ತಿಳಿದಿರುವುದಿಲ್ಲ. ಇತ್ತ ರಾಜೀವನಿಗೆ ಸ್ನೇಹ ಎನ್ನುವ ಹುಡುಗಿಯ ಜೊತೆ ಮದುವೆ ನಿಶ್ಚಯವಾಗಿರುತ್ತದೆ. ಮಂಗಳಗೌರಿ ಮನೆಕೆಲಸದ ಹುಡುಗಿಯಾಗಿ ರಾಜೀವನ ಮನೆಗೆ ಬರುತ್ತಾಳೆ. ಜೊತೆಗೆ ರಾಜೀವನ ಪ್ರೀತಿಯನ್ನು ಕೂಡ ಪಡೆಯುತ್ತಾಳೆ.
ಸ್ನೇಹನಿಗೆ ರಾಜೀವ ಎಂದರೆ ಪ್ರಾಣ. ಅವನಿಲ್ಲದೇ ಜೀವನವಿಲ್ಲ ಎಂದು ಅಂದಕೊಂಡವಳು. ರಾಜೀವನಿಗೆ ಮದುವೆಯಾಗಿರುವ ವಿಷಯ ತಿಳಿದರೆ ಆಕೆ ಹುಚ್ಚಿಯಾದಾಳು. ಹೇಗೆ ತನ್ನ ಮತ್ತು ಮಂಗಳ ಮದುವೆ ವಿಚಾರ ಬಹಿರಂಗಗೊಳಿಸುವುದು ಎಂದು ಯೋಚಿಸುತ್ತಿರುವಾಗಲೇ ರಾಜೀವನ ತಲೆಗೆ ಪೆಟ್ಟಾಗಿ ನೆನಪಿನ ಶಕ್ತಿ ಹೋಗುತ್ತದೆ. ಮಂಗಳಗೌರಿ ಯಾರು ಎಂಬ ವಿಚಾರವನ್ನು ಈತ ಮರೆತಿರುತ್ತಾನೆ. ರಾಜೀವನ ನೆನಪಿನ ಶಕ್ತಿ ವಾಪಸ್ ಬರುತ್ತದಾ? ಮಂಗಳ ಗೌರಿ ತನ್ನ ಮಡದಿ ಎನ್ನುವ ವಿಚಾರ ತಿಳಿಯತ್ತದಾ? ಎಂಬುದಲ್ಲಾ ಮುಂದಿನ ದಿನಗಳಲ್ಲಿ ತಿಳಿಯಲಿದೆ.
ಅಂದ ಹಾಗೇ ಕನ್ನಡ ಧಾರಾವಾಹಿ ಪರಭಾಷೆಗೆ ರಿಮೇಕ್ ಆಗುತ್ತಿರುವುದು ಇದೇ ಮೊದಲೇನಲ್ಲ. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಸ್ತೂರಿ ನಿವಾಸ, ಮನಸಾರೆ, ಜೀ ಕನ್ನಡದ ಜೊತೆಜೊತೆಯಲಿ, ಮಹಾದೇವಿ ಧಾರಾವಾಹಿಗಳು ಈಗಾಗಲೇ ಪರಭಾಷೆಗೆ ರಿಮೇಕ್ ಆಗಿತ್ತು. ಇದೀಗ ಮಂಗಳಗೌರಿಯ ಸರದಿ. ಕನ್ನಡ ಕಿರುತೆರೆಯಲ್ಲಿ ಹೊಸ ಅಲೆ ಸೃಷ್ಟಿ ಮಾಡಿರುವ ಮಂಗಳಗೌರಿ ಮದುವೆಯನ್ನು ತಮಿಳು ವೀಕ್ಷಕರು ಮೆಚ್ಚುತ್ತಾರಾ ಎಂದು ಕಾದು ನೋಡಬೇಕಾಗಿದೆ.