ದೂರದ ಊರಿಂದ ಹಮ್ಮೀರ ಬಂದ ಜರ್ತಾರಿ ಸೀರೆ ತಂದ...ಹಾಡು ಕೇಳಿದೊಡನೆ ನಮ್ಮ ಕಣ್ಣ ಮುಂದೆ ಬರುವುದು ನಟಿ ಮಹಾಲಕ್ಷ್ಮಿ. ಹೆಸರಿಗೆ ತಕ್ಕಂತೆ ನೋಡಲು ಮಹಾಲಕ್ಷ್ಮಿಯಂತೆ ಇದ್ದ ಈ ನಟಿ ಸುಮಾರು 30 ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೂಲತ: ತಮಿಳುನಾಡಿಗೆ ಸೇರಿದವರಾದರೂ ಕನ್ನಡ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿ ಕನ್ನಡತಿಯೇ ಆಗಿ ಹೋಗಿದ್ದರು.
ಡಾ. ರಾಜ್ಕುಮಾರ್, ಡಾ. ವಿಷ್ಣುವರ್ಧನ್, ಅನಂತ್ನಾಗ್, ಶಂಕರ್ನಾಗ್, ಪ್ರಭಾಕರ್, ಶಶಿಕುಮಾರ್, ಅಶೋಕ್ ಸೇರಿ ಆಗಿನ ಬಹುತೇಕ ಎಲ್ಲಾ ನಟರೊಂದಿಗೆ ಮಹಾಲಕ್ಷ್ಮಿ ನಟಿಸಿದ್ದರು. ಸ್ವಾಭಿಮಾನ, ಮದುವೆ ಮಾಡು ತಮಾಷೆ ನೋಡು, ಮಿ. ರಾಜ, ಜಯಸಿಂಹ, ಟೈಗರ್, ನವಭಾರತ, ಸಂಸಾರ ನೌಕೆ, ಇದು ಸಾಧ್ಯ, ಹೆಂಡ್ತಿಗೇಳ್ಬೇಡಿ, ಬಾರೇ ನನ್ನ ಮುದ್ದಿನ ರಾಣಿ, ಗಗನ , ಮನೇಲಿ ಇಲಿ ಬೀದೀಲಿ ಹುಲಿ ಸೇರಿ ಸುಮಾರು 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮಹಾಲಕ್ಷ್ಮಿ ನಟಿಸಿದ್ದರು. 1991 ರ ನಂತರ ಅವರು ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಸಿನಿಮಾಗಳಲ್ಲಿ ಮಾತ್ರವಲ್ಲ, ಸಾರ್ವಜನಿಕವಾಗಿ ಅವರು ಎಲ್ಲೂ ಕಾಣಿಸಿಕೊಳ್ಳಲಿಲ್ಲ. ಮಹಾಲಕ್ಷ್ಮಿ ಎಲ್ಲವನ್ನೂ ತ್ಯಜಿಸಿ ಸನ್ಯಾಸಿಯಾಗಿ ಜೀವನ ನಡೆಸುತ್ತಿದ್ದಾರೆ ಎಂಬ ರೂಮರ್ ಹಬ್ಬಿತ್ತು. ಜನರು ಕೂಡಾ ಇದನ್ನು ನಂಬಿದ್ದರು. ಆದರೆ ಇದೀಗ ಇವೆಲ್ಲಾ ನಿಜಕ್ಕೂ ರೂಮರ್ ಎಂಬುದು ಸಾಬೀತಾಗಿದೆ.
ಮಹಾಲಕ್ಷ್ಮಿ ಚೆನ್ನೈನಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಆದರೆ ಸನ್ಯಾಸಿಯಾಗಿಲ್ಲ. ಆಕೆಗೆ ಮದುವೆಯಾಗಿ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇತ್ತೀಚೆಗೆ ನಿರ್ದೇಶಕ ಶ್ರೀವತ್ಸ ಮಹಾಲಕ್ಷ್ಮಿ ಅವರನ್ನು ಭೇಟಿ ಆಗಿ ಅವರ ಇತ್ತಿಚೆಗಿನ ಪೋಟೋಗಳನ್ನು ತಮ್ಮ ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. 'ಹುಡುಕುತ್ತಿದ್ದವರಿಗೆ ಸಿಕ್ಕ ಮಹಾಲಕ್ಷ್ಮಿ. ಬೆಳ್ಳಿತೆರೆಯನ್ನು ತುಂಬಿ ತುಳುಕಿಸುತಿದ್ದ ಅದ್ಭುತ ನಟಿ *ಮಹಾಲಕ್ಷ್ಮಿ* #Mahalakshmi ಧಿಡೀರನೆ ಒಂದು ದಿನ ಸಿನಿಮಾ ಜಗ್ಗತ್ತಿನಿಂದ ಕಣ್ಮರೆಯಾದಾಗಿನಿಂದ ಅವರ ಅಡ್ರೆಸ್ ಕೇಳಿ ಹುಡುಕಿ ಬಂದವರ ಸಂಖ್ಯೆ ಬಹಳ. ಕಳೆದುಹೋಗಿದ್ದ ನಮ್ಮ *ಚಿನ್ನದ ಮೂಗುತಿ* ಅದು ಈಗ ಸಿಕ್ಕಿದೆ. ಬೆಳ್ಳಿತೆರೆಯ ನಾಸಿಕಕ್ಕೇರಲು ಮತ್ತೆ ಸಜ್ಜಾಗಿದೆ. ನಿರ್ದೇಶಕ ಮಿತ್ರರೇ, ಅದ್ಭುತ ಕಲಾವಿದೆ ಸದುಪಯೋಗಿಸಿಕೊಳ್ಳಿ. ಇದೋ ಇವರೇ ನಮ್ಮ, ನಿಮ್ಮ *ಮಹಾಲಕ್ಷ್ಮಿ*' ಎಂದು ಬರೆದಿದ್ದಾರೆ.
- " class="align-text-top noRightClick twitterSection" data="">
ಒಳ್ಳೆ ಕಥೆ ಇದ್ದರೆ ಮತ್ತೆ ಕನ್ನಡದಲ್ಲಿ ನಟಿಸಲು ರೆಡಿ ಎಂದು ಕೂಡಾ ಮಹಾಲಕ್ಷ್ಮಿ ಹೇಳಿದ್ದಾರಂತೆ. ಇನ್ನು ಮಹಾಲಕ್ಷ್ಮಿಗೆ ಇಬ್ಬರು ಹೆಣ್ಣುಮಕ್ಕಳಿದ್ದು ಅವರ ಸಿನಿಮಾ ಎಂಟ್ರಿ ಬಗ್ಗೆ ಪ್ರಶ್ನಿಸಿದಾಗ, ಮಕ್ಕಳು ಸಿನಿಮಾರಂಗಕ್ಕೆ ಬರುವುದಿಲ್ಲ, ಅವರ ಆಸಕ್ತಿಯೇ ಬೇರೆ ಎಂದು ಸ್ಪಷ್ಟಪಡಿಸಿದ್ದಾರೆ. ಬಹಳ ವರ್ಷಗಳ ನಂತರ ಮತ್ತೆ ಮಹಾಲಕ್ಷ್ಮಿ ಮತ್ತೆ ಕಾಣಿಸಿಕೊಂಡಿದ್ದು ಚಿತ್ರಪ್ರೇಮಿಗಳಿಗೆ ಇನ್ನಿಲ್ಲದ ಖುಷಿ ತಂದಿದೆ. ಇನ್ನು ಅವರನ್ನು ಮತ್ತೆ ತೆರೆ ಮೇಲೆ ನೋಡುವುದು ಯಾವಾಗ ಎಂದು ಕೂಡಾ ಬಹಳಷ್ಟು ಮಂದಿ ಕಾತರದಿಂದ ಕಾಯುತ್ತಿದ್ದಾರೆ. ಆದಷ್ಟು ಬೇಗ ಮಹಾಲಕ್ಷ್ಮಿ ಮತ್ತೆ ಕನ್ನಡಕ್ಕೆ ಬರುವಂತಾಗಲಿ ಎಂದು ನಮ್ಮದೊಂದು ಮನವಿ. ಜೊತೆಗೆ ಮಹಾಲಕ್ಷ್ಮಿ ಅವರನ್ನು ಜನರಿಗೆ ಮತ್ತೆ ತೋರಿಸಿದ ನಿರ್ದೇಶಕ ರವಿ ಶ್ರೀವತ್ಸ ಅವರಿಗೂ ಧನ್ಯವಾದ ಹೇಳಲೇಬೇಕು.