ಕನ್ನಡ ಚಿತ್ರರಂಗದಲ್ಲಿ ಸದ್ಯ ಲವ್ ಮಾಕ್ಟೈಲ್ 2 ಸಿನಿಮಾ ಯಶಸ್ಸಿನ ಬಳಿಕ, ಡಾರ್ಲಿಂಗ್ ಕೃಷ್ಣ ನಾಲ್ಕೈದು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಲವ್ ಮಾಕ್ಟೈಲ್ 1 ಹಾಗು ಲವ್ ಮಾಕ್ಟೈಲ್ 2 ಚಿತ್ರಗಳಲ್ಲಿ ಪ್ರೀತಿಯ ಆರಾಧಕನಾಗಿ ಕನ್ನಡ ಸಿನಿಮಾ, ಪ್ರೇಕ್ಷಕರಿಗೆ ಇಷ್ಟ ಆಗಿರುವ ಡಾರ್ಲಿಂಗ್ ಕೃಷ್ಣ, ಈಗ ಮಾಸ್ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ.
ಸದ್ಯ ಲೋಕಲ್ ಟ್ರೈನ್ ಎಂಬ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಮಾಸ್ ಲುಕ್ನಲ್ಲಿ ಪ್ರೇಕ್ಷಕರಿಗೆ ದರ್ಶನ ಕೊಡಲು ಸಜ್ಜಾಗಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿರೋ ಲೋಕಲ್ ಟ್ರೈನ್ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಹೀಗಾಗಿ ಈ ಸಿನಿಮಾದ ಬಗ್ಗೆ ಮಾತನಾಡೋದಿಕ್ಕೆ ನಟ ಡಾರ್ಲಿಂಗ್ ಕೃಷ್ಣ, ನಟಿಯರಾದ ಮೀನಾಕ್ಷಿ ದೀಕ್ಷಿತ್, ಎಸ್ತರ್ ನರೋನಾ, ನಟ ಭಜರಂಗಿ ಲೋಕಿ, ನಿರ್ಮಾಪಕ ಸುಬ್ರಾಯ ವಾಳ್ಕೆ ಹಾಗು ಸಂಕಲನಕಾರ ಪಿ.ಆರ್ ಸೌಂದರ್ಯ ರಾಜ್ ಉಪಸ್ಥಿತರಿದ್ದರು.
ಡಾರ್ಲಿಂಗ್ ಕೃಷ್ಣ ಮಾತನಾಡಿ, ಬೇರೆ ಊರಿನಿಂದ ಬೆಂಗಳೂರಿಗೆ ಪ್ರತಿದಿನ ಟ್ರೈನ್ನಲ್ಲಿ ಓಡಾಡುವ ಜನರ ಕಥೆಯಿದಾಗಿದೆ. ಪಕ್ಕಾ ಕಮರ್ಷಿಯಲ್ ಸಿನಿಮಾ ಇದು. ಒಳ್ಳೆ ಸಾಂಗ್, ಫೈಟ್ ಗಳಿದ್ದು, ಹಾಡುಗಳು ತುಂಬಾನೆ ಚೆನ್ನಾಗಿ ಮೂಡಿ ಬಂದಿವೆ. ಇದು ಪಕ್ಕಾ ಪೈಸಾ ವಸೂಲ್ ಚಿತ್ರವಾಗಿದ್ದು, ಕೊರೊನಾ ಕಾರಣದಿಂದ ಸಿನಿಮಾ ತಡವಾಗಿದೆ. ಮಾಸ್ ಪ್ರಿಯರಿಗೆ ಲೋಕಲ್ ಟ್ರೈನ್ ಸಿನಿಮಾ ಇಷ್ಟ ಆಗುತ್ತೆ ಎಂದರು.
ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಜೊತೆ ಇಬ್ಬರು ನಾಯಕಿಯರು ರೋಮ್ಯಾನ್ಸ್ ಮಾಡಲಿದ್ದಾರೆ. ಅದರಲ್ಲಿ ಬಾಲಿವುಡ್ ಹಾಗು ಟಾಲಿವುಡ್ ಸಿನಿಮಾಗಳಲ್ಲಿ ಮಿಂಚಿರುವ, ಮೀನಾಕ್ಷಿ ದೀಕ್ಷಿತ್ ಕೃಷ್ಣಗೆ ಜೋಡಿಯಾಗಿದ್ದಾರೆ. ಮೀನಾಕ್ಷಿ ದೀಕ್ಷಿತ್ ಹೇಳುವ ಹಾಗೆ ಕಮರ್ಷಿಯಲ್ ಎಲಿಮೆಟ್ಸ್ ಚಿತ್ರದಲ್ಲಿವೆ ಅಂತೆ.
ಬಳಿಕ ಎಸ್ತರಾ ನರೋನಾ ಮಾತನಾಡಿ, ಬಹಳ ಪ್ರೀತಿಯಿಂದ ಮಾಡಿದ ಪಕ್ಕಾ ಕಮರ್ಷಿಯಲ್ ಸಿನಿಮಾ ಇದು. ಈ ಚಿತ್ರದಲ್ಲಿ ನನ್ನದು ತುಂಬಾನೇ ಬೋಲ್ಡ್ ಪಾತ್ರ ಬಹಳ ಚೆನ್ನಾಗಿದೆ ಎಂದರು.
ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳಿಂದ ಗಮನ ಸೆಳೆಯುತ್ತಿರೋ ಭಜರಂಗಿ ಲೋಕಿ, ಈ ಚಿತ್ರದಲ್ಲಿ ನಕ್ಕು ನಗಿಸುವ ಖಳನಟನ ಪಾತ್ರ ಮಾಡಿದ್ದಾರಂತೆ. ಇದರ ಜೊತೆಗೆ ಸಾಧುಕೋಕಿಲ, ಮೈಕಲ್ ಮಧು, ಟೆನ್ನಿಸ್ ಕೃಷ್ಣ ಸೇರಿದಂತೆ ಸಾಕಷ್ಟು ತಾರ ಬಳಗ ಈ ಚಿತ್ರದಲ್ಲಿದೆ.
ಈ ಸಿನಿಮಾವನ್ನ ವೈ.ಎನ್. ರುದ್ರಮುನಿ ನಿರ್ದೇಶನ ಮಾಡಿದ್ದಾರೆ. ಮೂಲತಃ ಕುಮಟಾದವರಾದ, ಸುಬ್ರಾಯ ವಾಳ್ಕೆ ಈ ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ. ಮ್ಯೂಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಚಿನ್ನಿ ಪ್ರಕಾಶ್ ಹಾಗು ರಾಜ್ ಸುಂದರಮ್ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ರಮೇಶ್ ಬಾಬು ಈ ಸಿನಿಮಾಗೆ ಕ್ಯಾಮರಾ ವರ್ಕ್ ಮಾಡಿದ್ದು, ಸದ್ಯ ಟ್ರೈಲರ್ ನಿಂದ ಸದ್ದು ಮಾಡುತ್ತಿರುವ ಲೋಕಲ್ ಟ್ರೈನ್ ಸಿನಿಮಾ ಏಪ್ರಿಲ್ 1ಕ್ಕೆ ರಾಜ್ಯಾದ್ಯಂತ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.