ಅದ್ಭುತ ನಟನೆಯಿಂದಾಗಿ ಜನರ ಮನಸ್ಸಿನಲ್ಲಿ ಮನೆ ಮಾಡಿದ್ದ ನಟಿ ಶ್ರೀದೇವಿ ಇಂದು ನಮ್ಮೊಂದಿಗಿಲ್ಲ. ಆದರೆ ಅವರ ನೆನಪುಗಳು ಮಾತ್ರ ಅಚ್ಚಳಿಯದೆ ಉಳಿದಿವೆ. 54ನೇ ವಯಸ್ಸಿನಲ್ಲಿ ಲೌಕಿಕ ಜಗತ್ತಿಗೆ ವಿದಾಯ ಹೇಳಿದ ಶ್ರೀದೇವಿಯವರಿಗಿಂದು 58ನೇ ಜನ್ಮದಿನ.
2018 ರಲ್ಲಿ ತನ್ನ ಸೋದರಳಿಯ ಮೋಹಿತ್ ಮದುವೆಗಾಗಿ ದುಬೈಗೆ ತೆರಳಿದ್ದ ಶ್ರೀದೇವಿ, ವಿವಾಹ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಹೋಟೆಲ್ನಲ್ಲಿ ಸ್ನಾನದ ತೊಟ್ಟಿಯಲ್ಲಿ ಮುಳುಗಿ ಮೃತಪಟ್ಟರು ಎಂದು ಹೇಳಲಾಗಿತ್ತು.
ಶ್ರೀದೇವಿ ಆಗಸ್ಟ್ 13 ರಂದು ಜನಿಸಿದರು. 1967ರಲ್ಲಿ ಬಿಡುಗಡೆಯಾದ 'ಕಣ್ಣನ್ ಕರುಣೈ' ಎಂಬ ಸಿನಿಮಾದ ಮೂಲಕ ಬಾಲ ಕಲಾವಿದೆಯಾಗಿ ಕೇವಲ 10 ವರ್ಷದವರಿದ್ದಾಗಲೇ ಬೆಳ್ಳಿ ಪರದೆಗೆ ಪರಿಚಯವಾದರು. ಕನ್ನಡದ ಜನಪ್ರಿಯ 'ಭಕ್ತ ಕುಂಬಾರ' ಸೇರಿದಂತೆ ದಕ್ಷಿಣ ಭಾರತದ ಹಲವು ಸಿನಿಮಾಗಳಲ್ಲಿ ಹಾಗೂ ಹಿಂದಿ ಸಿನಿಮಾಗಳಲ್ಲಿ ಬಣ್ಣಹಚ್ಚಿ, 90ರ ದಶಕದಲ್ಲಿ ಬಹಳ ಬೇಡಿಕೆಯ ಹಾಗೂ ಜನಪ್ರಿಯ ನಟಿಯಾಗಿದ್ದರು.
ಭಾರತ ಚಲನಚಿತ್ರರಂಗದ ಜನಪ್ರಿಯ ನಟಿಯರಲ್ಲೊಬ್ಬರಾದ ಶ್ರೀದೇವಿ ಅವರಿಗೆ 2013ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಲಾಯಿತು. 1971 ರಲ್ಲಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. 'ಶಾದ್ಮಾ' ಚಿತ್ರಕ್ಕಾಗಿ ಮೊದಲ ಬಾರಿಗೆ ಶ್ರೀದೇವಿ ಅತ್ಯುತ್ತಮ ನಟಿ ಫಿಲ್ಮ್ ಫೇರ್ ಪ್ರಶಸ್ತಿ ಪಡೆದಿದ್ದಾರೆ. ತಮಿಳು ಸ್ಟಾರ್ ನಟರಾದ ರಜನಿಕಾಂತ್, ಕಮಲ್ ಹಾಸನ್ ಜತೆಗೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಜೊತೆಗೆ 7 ಸಿನಿಮಾಗಳಲ್ಲಿ ದ್ವಿಪಾತ್ರದಲ್ಲಿ ನಟಿಸಿ ಇಂದಿಗೂ ಅಭಿಮಾನಿಗಳ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ.
1996 ರಲ್ಲಿ ಬೋನಿ ಕಪೂರ್ ಜೊತೆ ಸಪ್ತಪದಿ ತುಳಿದ ಶ್ರೀದೇವಿಗೆ ಜಾಹ್ನವಿ ಕಪೂರ್ ಮತ್ತು ಖುಷಿ ಕಪೂರ್ ಎಂಬ ಹೆಣ್ಣುಮಕ್ಕಳಿದ್ದು, ಜಾಹ್ನವಿ ಕಪೂರ್ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ತಾಯಿಯೊಂದಿಗೆ ಕಳೆದ ಸುಂದರ ಕ್ಷಣದ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಮದುವೆಯಾದ 16 ವರ್ಷಗಳ ನಂತರ 2011ರಲ್ಲಿ 'ಇಂಗ್ಲಿಷ್ ವಿಂಗ್ಲಿಷ್' ಚಿತ್ರದ ಮೂಲಕ ಶ್ರೀದೇವಿ ಮತ್ತೊಮ್ಮೆ ಚಿತ್ರ ಜಗತ್ತಿಗೆ ಕಾಲಿಟ್ಟರು. 'ಇಂಗ್ಲಿಷ್ ವಿಂಗ್ಲಿಷ್' ನಂತರ 2017 ರಲ್ಲಿ ಅವರು 'ಮಾಮ್' ನಲ್ಲಿ ತಮ್ಮ ಅತ್ಯುತ್ತಮ ನಟನೆಯನ್ನು ಪರಿಚಯಿಸಿದರು. 'ಮಾಮ್' ಶ್ರೀದೇವಿಯ 300 ನೇ ಚಿತ್ರ.