ಮುಂಬೈ(ಮಹಾರಾಷ್ಟ್ರ): ಕೋವಿಡ್ ಸೋಂಕಿಗೊಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ದೇಶದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರಿಗೆ ತೀವ್ರ ನಿಗಾ ಘಟಕದಲ್ಲೇ ಚಿಕಿತ್ಸೆ ಮುಂದುವರೆದಿದೆ. ಅವರ ಆರೋಗ್ಯದ ಬಗ್ಗೆ ಇಂದು ಆಸ್ಪತ್ರೆಯ ವೈದ್ಯರು ಮಾಹಿತಿ ಹಂಚಿಕೊಂಡಿದ್ದಾರೆ.
ಬ್ರೀಚ್ ಕ್ಯಾಂಡಿ ಆಸ್ಪತ್ರೆ ವೈದ್ಯ ಡಾ.ಪ್ರತೀತ್ ಸಮಧಾನಿ ಮಾತನಾಡಿದ್ದು, ತೀವ್ರ ನಿಗಾ ಘಟಕದಲ್ಲೇ ಅವರಿಗೆ ಚಿಕಿತ್ಸೆ ಮುಂದುವರೆದಿದ್ದು, ಇನ್ನೂ ಕೆಲ ದಿನಗಳ ಕಾಲ ಕಾಯ್ದು ನೋಡಬೇಕಾಗಿದೆ. ಅವರ ಚೇತರಿಕೆಗಾಗಿ ಎಲ್ಲರೂ ಪ್ರಾರ್ಥಿಸಿ ಎಂದು ತಿಳಿಸಿದ್ದಾರೆ. ಕೋವಿಡ್ ಜೊತೆಗೆ ಅವರು ನ್ಯುಮೋನಿಯಾದಿಂದಲೂ ಬಳಲುತ್ತಿರುವ ಕಾರಣ ಕೆಲ ದಿನಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆಯಲಿದೆ ಎಂದಿದ್ದಾರೆ.
ಇದನ್ನೂ ಓದಿರಿ: ಉನ್ನಾವೋ ರೇಪ್ ಸಂತ್ರಸ್ತೆಯ ತಾಯಿ ವಿರುದ್ಧ ಎಸ್ಪಿ ಸ್ಪರ್ಧಿಸಲ್ಲ: ಅಖಿಲೇಶ್ ಯಾದವ್ ಘೋಷಣೆ
ವಯೋಸಹಜ ಕಾಯಿಲೆ ಸಂಬಂಧವಾಗಿ ಅವರನ್ನ ಮುಂಬೈನ ಪ್ರತಿಷ್ಠಿತ ಬೀಚ್ ಕ್ಯಾಂಡಿ ಆಸ್ಪತ್ರೆಗೆ ಜ.11ರಂದು ಕರೆದೊಯ್ಯಲಾಗಿತ್ತು. ಈ ವೇಳೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ವರದಿ ಪಾಸಿಟಿವ್ ಬಂದಿದೆ. ಹೀಗಾಗಿ, ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲಾಗಿದೆ.
92 ವರ್ಷದ ಪ್ರಖ್ಯಾತ ಗಾಯಕಿ 70ರ ದಶಕದಲ್ಲಿ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ರೀತಿಯ ವಿಶಿಷ್ಟ ಛಾಪು ಮೂಡಿಸಿದ್ದರು. ಇವರಿಗೆ ದೇಶದ ಪ್ರತಿಷ್ಠಿತ ಪ್ರಶಸ್ತಿಗಳಾದ ಭಾರತ ರತ್ನ, ಪದ್ಮವಿಭೂಷಣ, ಪದ್ಮಭೂಷಣ, ದಾದಾಸಾಹೇಬ್ ಫಾಲ್ಕೆ ಸೇರಿದಂತೆ ಅನೇಕ ಗೌರವಗಳು ಸಂದಿವೆ. ಈವರೆಗೆ ಇವರು 30 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿ ನೀಡಿದ್ದಾರೆ.