ಯಾವುದೇ ಒಂದು ಸಿನಿಮಾ ತಯಾರಾಗಬೇಕು ಅಂದರೆ ಅದಕ್ಕೆ ಕಾರ್ಮಿಕರ ಅವಶ್ಯಕತೆ ಇದೆ. ಸಾವಿರಾರು ಕಾರ್ಮಿಕರರು ದೊಡ್ಡ ಸಿನಿಮಾಗಳಿಗೆ ಕೆಲಸ ಮಾಡಿರುತ್ತಾರೆ. ಒಂದು ಸಾಧಾರಣ ಸಿನಿಮಾ ಅಂದರೂ 100 ಕಾರ್ಮಿಕರು ವಿವಿಧ ವಿಭಾಗಗಳಿಂದ ಬೇಕಾಗುತ್ತದೆ.
ಆದರೆ, ನಾಯಕ ಸಿನಿಮಾದಲ್ಲಿ ಕಾರ್ಮಿಕ ಆಗುವುದು ಅತಿ ಹೆಚ್ಚಾಗಿ ಕಂಡು ಬರುವುದಿಲ್ಲ. ಅಂದಿನ ಕಾಲದಲ್ಲಿ ‘ಕರುಳಿನ ಕರೆ’ ಸಿನಿಮಾದಲ್ಲಿ ರಾಜಕುಮಾರ್ 1970ರಲ್ಲೇ ಕಾರ್ಮಿಕ ವರ್ಗವನ್ನು ಪ್ರತಿನಿಧಿಸಿ ಪಾತ್ರ ನಿರ್ವಹಿಸಿದ್ದರು. ಆಮೇಲೆ ರಾಜಕುಮಾರ್ ಮತ್ತು ಮಾಧವಿ ಅಭಿನಯದ ‘ಅನುರಾಗ ಅರಳಿತು’, ‘ಬಡವರ ಬಂದು’ ಸಹ ಕಾರ್ಮಿಕರ ಪರವಾದ ಸಿನಿಮಾಗಳು.
ಆ ನಂತರ ಡಾ. ವಿಷ್ಣುವರ್ಧನ ಹಾಗೂ ಶಂಕರ್‌ನಾಗ್ ಅಭಿನಯದ ‘ಕಾರ್ಮಿಕ ಕಳ್ಳನಲ್ಲ’, ನವರಸ ನಾಯಕ ಜಗ್ಗೇಶ್ ಕಾರ್ಮಿಕ ಪಾತ್ರ ಮಾಡಿದ್ದು ಉಂಟು. ಆಮೇಲೆ ‘ಸರ್ವರ್ ಸೋಮಣ್ಣ’ ಚಿತ್ರದಲ್ಲಿ ಹೋಟೆಲ್‌ನಲ್ಲಿ ಸರ್ವರ್ ಪಾತ್ರ ಮಾಡಿದ್ದು ಬಿಟ್ಟರೆ ಕಾರ್ಮಿಕರ ಹೋರಾಟ ಹೆಚ್ಚಾಗಿ ಕನ್ನಡ ಸಿನಿಮಾಗಳಲ್ಲಿ ಕಂಡು ಬಂದಿಲ್ಲ.
ಆಟೋಚಾಲಕ ಕಾರ್ಮಿಕ ಸೇರುವ ವೃತ್ತಿ. ಆಟೋ ಚಾಲಕರಾಗಿ ದಿ. ಶಂಕರ್‌ನಾಗ್ ‘ಆಟೋ ರಾಜ’ ಇಂದಿಗೂ ಅಭಿಮಾನಿಗಳ ಮನಸಿನಲ್ಲಿದ್ದಾರೆ. ಆಟೋ ಹಿಂದೆ ಇಂದಿಗೂ ಶಂಕರ್ ನಾಗ್ ಫೋಟೋ ಇರುತ್ತೆ. ಅನೇಕ ಕಡೆ ಶಂಕರ್‌ನಾಗ್ ಆಟೋ ನಿಲ್ದಾಣ ಅಂತಾ ಸಹ ಇರುತ್ತೆ. ಕನ್ನಡ ಸಿನಿಮಾಗಳಲ್ಲಿ ಡಾ. ವಿಷ್ಣು, ಉಪೇಂದ್ರ, ಸುದೀಪ್, ದರ್ಶನ್, ಗಣೇಶ್, ವಿಜಯ್ ಸಹ ಆಟೋ ಚಾಲಕನ ಪಾತ್ರ ನಿರ್ವಹಿಸಿದ್ದಾರೆ.
ಈ ಶ್ರಮಿಕ ಜೀವಿಯನ್ನು ನೆನೆದು ಪ್ರತಿ ವರ್ಷ ಕರ್ನಾಟಕ ಚಲನಚಿತ್ರ ಕಾರ್ಮಿಕರ ಕಲಾವಿದರ ಒಕ್ಕೂಟ ಮೇ 1ರಂದೇ ಒಂದು ಕಾರ್ಯಕ್ರಮ ಗಾಂಧಿನಗರದ ಕಚೇರಿ ಮುಂದೆ ಆಚರಣೆ ಮಾಡಿಕೊಳ್ಳುವುದು ಬಹಳ ವರ್ಷಗಳಿಂದ ಕಂಡಿದ್ದೇವೆ. ಆದರೆ, ಈ ವರ್ಷ ಲಾಕ್‌ಡೌನ್‌ನಿಂದಾಗಿ ಆ ಕಾರ್ಯಕ್ರಮ ರದ್ದಾಗಲಿದೆ.