ಸ್ಯಾಂಡಲ್ವುಡ್ನಲ್ಲಿ ಮಾದಕ ವಸ್ತುಗಳ ಕಥೆಯುಳ್ಳ ಬಹಳಷ್ಟು ಸಿನಿಮಾಗಳು ಬಂದಿವೆ. ಇದೀಗ ಈ ಸಾಲಿಗೆ 'ಬ್ಲಾಂಕ್' ಚಿತ್ರ ಸೇರಿದೆ. ಕೃಷಿ ತಾಪಂಡ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಮಾದಕ ವಸ್ತುಗಳನ್ನು ಸೇವಿಸಿದಾಗ ಮನುಷ್ಯನ ಮೆದುಳು ಬ್ಲಾಂಕ್ ಆಗಿ ಏನೆಲ್ಲಾ ನಡೆಯುತ್ತದೆ ಎಂಬ ವಿಚಾರವನ್ನು ಚಿತ್ರದಲ್ಲಿ ತೋರಿಸಲಾಗಿದೆ. ಕನಸು ಮತ್ತು ವಾಸ್ತವ ಚಿತ್ರದ ಹೈಲೈಟ್. ಚಿತ್ರದ ಘಟನೆಗಳು ಕಾಲ್ಪನಿಕವಾಗಿದ್ದು 13 ನೇ ಬಹುಮಹಡಿ ಕಟ್ಟಡದ ಅಂತಸ್ತಿನಲ್ಲಿ ನಡೆಯುವ ಸೈಕಲಾಜಿಕಲ್, ಥ್ರಿಲ್ಲರ್ ನಿರೂಪಣೆ ಹೊಂದಿದೆ. ಚಿತ್ರದಲ್ಲಿ ಒಂದೊಳ್ಳೆ ಸಂದೇಶ ಕೂಡಾ ಇದೆಯಂತೆ.
ಮೈಸೂರಿನ ಎಸ್. ಜಾಯ್ ಈ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶನಕ್ಕೆ ಇಳಿದಿದ್ದಾರೆ. ಇಂಜಿನಿಯರಿಂಗ್ ಮುಗಿಸಿರುವ ಜಾಯ್ಗೆ 'ಲೂಸಿಯ' ಚಿತ್ರ ಪ್ರೇರಣಿಯಂತೆ. ತಾವೇ ಬ್ಲಾಂಕ್ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಮೂರು ಶೇಡ್ನಲ್ಲಿ ಚಿತ್ರದ ನಿರೂಪಣೆ ಮಾಡಲಾಗಿದೆ.
ಪೂರ್ಣಚಂದ್ರ ತೇಜಸ್ವಿ ಮೈಸೂರು, ಹಾಸನದ ಭರತ್, ಕನ್ಯಾಕುಮಾರಿಯ ರಿಶ್ ಮಲ್ಲಿಕ್, ತೀರ್ಥ ಪೊನ್ನಪ್ಪ, ಸುಚೇಂದ್ರ ಪ್ರಸಾದ್, ಪ್ರಶಾಂತ್ ಸಿದ್ದಿ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ಶ್ರೀ ಸಸ್ತ ಸಂಗೀತ, ಜೆ.ಪಿ. ಮ್ಯಾನ್ ಛಾಯಾಗ್ರಹಣ, ಆದಿ ಆದರ್ಶ ಸಂಕಲನ, ವೀಣ ಅವರ ವಸ್ತ್ರ ವಿನ್ಯಾಸ ಇದೆ.
ಮೈಸೂರು, ಕಡೂರು, ಚಿಕ್ಕಮಗಳೂರು ಹಾಗೂ ಇನ್ನಿತರ ಸ್ಥಳಗಳಲ್ಲಿ 32 ದಿನಗಳ ಚಿತ್ರೀಕರಣ ಮಾಡಲಾಗಿದೆ. ಫೆಲಿಸಿಟಿ ಫಿಲ್ಮ್ಸ್ ಮೂಲಕ ಚಿಕ್ಕಮಗಳೂರಿನ ಉದ್ಯಮಿ, ಶಿಕ್ಷಣ ತಜ್ಞ ಎನ್.ಪಿ. ಮಂಜುನಾಥ ಪ್ರಸನ್ನ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.