ಅಕ್ಟೋಬರ್ 2ರಂದು ಬಿಡುಗಡೆಯಾದ 'ಸೈರಾ ನರಸಿಂಹರೆಡ್ಡಿ' ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ನಿನ್ನೆ ಬೆಂಗಳೂರಿನಲ್ಲಿ ನಡೆದ ಚಿತ್ರದ ಪ್ರೆಸ್ಮೀಟ್ನಲ್ಲಿ ಕಿಚ್ಚ ಸುದೀಪ್ ಭಾಗವಹಿಸಿದ್ದರು. ಕನ್ನಡ ವರ್ಷನ್ ಕೂಡಾ ಸಕ್ಸಸ್ ಆಗಿದ್ದು, ಕಿಚ್ಚ ಕನ್ನಡಿಗರಿಗೆ ಧನ್ಯವಾದ ಅರ್ಪಿಸಿದರು.
ಇನ್ನು ಪ್ರೆಸ್ಮೀಟ್ನಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಬಯೋಪಿಕ್ ಸಿನಿಮಾ ಮಾಡುತ್ತೀರಾ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಕಿಚ್ಚ ಒಂದು ಕ್ಷಣ ಮೌನವಾಗಿ ನಗುತ್ತಲೇ ಅದು ಕಷ್ಟಕರ ವಿಚಾರ ಎಂದು ಉತ್ತರಿಸಿದರು. ಏಕೆಂದರೆ ಅಂಬರೀಶ್ ಈಗಲೂ ನಮ್ಮ ಮಧ್ಯೆ ಬದುಕಿದ್ದಾರೆ. ಅವರ ಜೀವನದಲ್ಲಿ ಸಿನಿಮಾ ಮಾಡಬಹುದಾದ ಬಹಳಷ್ಟು ಪ್ರಮುಖ ಅಂಶಗಳಿವೆ. ಆದರೆ ಅದು ಈಗ ಸಾಧ್ಯವಿಲ್ಲ. ಅವರನ್ನು ನಾವೆಲ್ಲಾ ಹತ್ತಿರದಿಂದ ನೋಡಿದ್ದೇವೆ. ಆದರೆ ಅವರ ಬಾಲ್ಯದ ಬಗ್ಗೆ ಬಹಳ ರಿಸರ್ಚ್ ಮಾಡಬೇಕು. ನಮ್ಮ ಮುಂದಿನ ಜನರೇಶನ್ ಅಂಬಿ ಮಾಮನ ಬಯೋಪಿಕ್ ಮಾಡಬಹುದು ಎಂದು ಕಿಚ್ಚ ಹೇಳಿದರು.
ಇನ್ನು ಕರ್ನಾಟಕದ ಹೆಮ್ಮೆಯ ಕ್ರಿಕೆಟಿಗ ರಾಹುಲ್ ದ್ರಾವಿಡ್ ಬಯೋಪಿಕ್ ಸಿನಿಮಾ ಮಾಡ್ತಾರೆ ಎಂಬ ಗಾಸಿಪ್ಗೆ ಸುದೀಪ್ ತೆರೆ ಎಳೆದಿದ್ದಾರೆ. ನಾನು ರಾಹುಲ್ ದ್ರಾವಿಡ್ ಬಯೋಪಿಕ್ ಸಿನಿಮಾ ಕೂಡಾ ಮಾಡ್ತಿಲ್ಲ. ನೀವೆಲ್ಲಾ ನನ್ನನ್ನು ಸಿಸಿಎಲ್ನಲ್ಲಿ ನೋಡಿ ಕನ್ಫ್ಯೂಸ್ ಆಗಿರಬೇಕು. ರಾಹುಲ್ ದ್ರಾವಿಡ್ ಒಬ್ಬ ಜಂಟಲ್ಮ್ಯಾನ್. ಅವರ ಜೀವನ ಕೂಡಾ ಸಿನಿಮಾ ಮಾಡಲು ಯೋಗ್ಯವಾಗಿದೆ. ಆದರೆ ಅದು ನನ್ನಿಂದ ಸಾಧ್ಯವಿಲ್ಲ. ಬೇರೆ ಯಾರಾದರೂ ಸಿನಿಮಾ ಮಾಡಿದರೆ ನಾನು ಖಂಡಿತ ಟಿಕೆಟ್ ಕೊಂಡು ಸಿನಿಮಾ ನೋಡುತ್ತೇನೆ. ಬೇಕಾದ್ರೆ ಜಿ.ಆರ್. ವಿಶ್ವನಾಥ್ ಬಯೋಪಿಕ್ ಮಾಡಬಹುದು. ಆದರೆ ಅಲ್ಲೂ ಸಮಸ್ಯೆಯಿದೆ. ಹೈಟ್ ತೊಂದರೆ ಆಗುತ್ತೆ ಎಂದು ಕಿಚ್ಚ ಕಿಚಾಯಿಸಿದರು.