ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕಳೆದುಕೊಂಡಿದ್ದ ದರ್ಶನ್ ಜತೆಗಿನ ಸ್ನೇಹವನ್ನು ಮತ್ತೆ ಚಿಗುರಿಸಲು ಸಾಕಷ್ಟು ಪ್ರಯತ್ನಪಟ್ಟರು. ಆಗಾಗ ಗೆಳೆಯನ ಬಗ್ಗೆ ಅವರು ಪ್ರೀತಿಯ ಮಾತುಗಳನ್ನಾಡುತ್ತಿದ್ದರು. ಆದರೆ, ಇದಕ್ಕೆ ದರ್ಶನ್ ಅವರಿಂದ ಯಾವುದೇ ಪಾಸಿಟಿವ್ ರಿಯಾಕ್ಷನ್ ಬರಲೇ ಇಲ್ಲ. ಈ ಹಿನ್ನೆಲೆಯಲ್ಲಿ ದರ್ಶನ್ ಸ್ನೇಹದ ವಿಚಾರವಾಗಿ ಕಿಚ್ಚ ಕಠಿಣ ನಿಲುವು ತೆಳೆದಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಕಾರಣಾಂತರಗಳಿಂದ ದರ್ಶನ್ ಹಾಗೂ ಸುದೀಪ್ ಅವರ ಸ್ನೇಹ ಮುರಿದು ಬಿತ್ತು. ಅಲ್ಲಿಂದ ಒಬ್ಬರನ್ನೊಬ್ಬರ ಮುಖ ನೋಡದಂತಾದರು ಈ ಜಿಗರಿ ದೋಸ್ತರು. ಆದರೆ, ಸುದೀಪ್ ಸುಮ್ಮನೆ ಕೂಡಲಿಲ್ಲ. ನಡೆದು ಹೋಗಿದ್ದನ್ನೆಲ್ಲ ಮರೆತು ಮತ್ತೆ ದರ್ಶನ್ನೆಡೆಗೆ ಸ್ನೇಹದ ಹಸ್ತ ಚಾಚಿದರು. ದಾಸನ ಕುರುಕ್ಷೇತ್ರ ಚಿತ್ರ ಅನೌನ್ಸ್ ಆಗಿದ್ದಾಗ ಸುದೀಪ್ ಪ್ರೀತಿಯಿಂದ ವಿಶ್ ಮಾಡಿದ್ರು. ದಚ್ಚು ಕಾರು ಅಪಘಾತವಾಗಿದ್ದ ವೇಳೆ 'ಬೇಗನೆ ಅರಾಮಾಗಿ ಬಾ ಗೆಳೆಯ' ಎಂದು ಹಾರೈಸಿದ್ದರು. ಗಂಡುಗಲಿ ವೀರ ಮದಕರಿ ನಾಯಕ ಚಿತ್ರದ ವಿಚಾರದಲ್ಲಿ ತಾವೇ ಹಿಂದೆ ಸರಿದರು. ಅಷ್ಟೇ ಅಲ್ಲ, ತಮ್ಮ ಮನೆಯಲ್ಲಿ ದರ್ಶನ್ ಜತೆಗಿರುವ ದೊಡ್ಡ ಪೋಟೊವೊಂದನ್ನು ಇಂದಿಗೂ ಗೋಡೆಗೆ ನೇತು ಹಾಕಿಕೊಂಡಿದ್ದಾರೆ.
ಹೀಗೆ 'ನೀನು ಮರೆತರು ನಾ ನಿನ್ನ ಮರೆಯಲಾರೆ' ಎನ್ನುತ್ತಿದ್ದ ಸುದೀಪ್ ಮನಸ್ಸು ಈಗ ಬದಲಾದಂತೆ ಕಾಣುತ್ತದೆ. ಯಾಕೆಂದರೆ ಅವರು ಟ್ವಿಟರ್ನಲ್ಲಿ ದರ್ಶನ್ ಅವರನ್ನು ಅನ್ಫಾಲೊ ಮಾಡಿದ್ದಾರೆ. ಈ ಮೊದಲು ಸುದೀಪ್ ಟ್ವಿಟ್ಟರ್ನಲ್ಲಿ 66 ಮಂದಿಯನ್ನು ಹಿಂಬಾಲಿಸುತ್ತಿದ್ದರು. ಆದರೀಗ ಈ ಸಂಖ್ಯೆ 65ಕ್ಕೆ ಇಳಿದಿದೆ. ಈ ಪಟ್ಟಿಯಲ್ಲಿ ದರ್ಶನ್ ಹೆಸರು ಕಾಣದಾಗಿದೆ.
ಸುದೀಪ್ ಹೀಗೆ ಮಾಡಿದ್ದೇಕೆ?
ಮೊದಲೇ ಹೇಳಿದಂತೆ ದರ್ಶನ್ ಬಗ್ಗೆ ಸುದೀಪ್ ಸ್ನೇಹದ ಭಾವನೆ ಹೊಂದಿದ್ದರು. ಆದರೆ, ಇತ್ತೀಚಿಗಷ್ಟೆ ಕುರುಕ್ಷೇತ್ರದ ಮಾಧ್ಯಮಗೋಷ್ಠಿಯಲ್ಲಿ ಸುದೀಪ್ ಸ್ನೇಹದ ಬಗ್ಗೆ ಕೇಳಿದ ಪ್ರಶ್ನೆಗೆ ದರ್ಶನ್ ಸರಿಯಾಗಿ ಉತ್ತರಿಸಿರಲಿಲ್ಲ. ಎಲ್ಲವನ್ನೂ ನಾನು ಮಾಧ್ಯಮಗಳನ್ನೇ ಕೇಳಿ ಮಾಡಬೇಕಾ? ಅದು ನನ್ನ ಪರ್ಸನಲ್ ವಿಚಾರ ಎಂದಷ್ಟೆ ಹೇಳಿದ್ದರು.
ಸುದೀಪ್ ಅವರಿಂದ ಸ್ನೇಹ ಮುರಿದುಕೊಂಡ ನಂತರ ಎಲ್ಲಿಯೂ ಕೂಡ ಒಂದೇ ಮಾತು ಆಡಿರಲಿಲ್ಲ ದರ್ಶನ್. ಆದರೆ, ಮೊನ್ನೆ ಅವರು ಆಡಿರುವ ಮಾತುಗಳಿಂದ ಸುದೀಪ್ ಅವರಿಗೆ ನೋವು ಆಗಿರಬಹುದು. ನಾನು ಏನು ಮಾಡಿದ್ರೂ ಪ್ರಯೋಜನ ಇಲ್ಲ ಎಂದುಕೊಂಡಂತಿರುವ ಅವರು, ಸದ್ಯ ಡಿಬಾಸ್ ಅವರನ್ನು ಅನ್ಫಾಲೋ ಮಾಡಿದ್ದಾರೆ ಎನ್ನಲಾಗುತ್ತಿದೆ.
ಮತ್ತೊಂದು ವಿಚಾರ ಏನಂದರೆ, ನಟ ದರ್ಶನ್ ಎರಡು ವರ್ಷಗಳ ಹಿಂದೆಯೇ ಕಿಚ್ಚನನ್ನು ಟ್ವಿಟ್ಟರ್ಲ್ಲಿ ಅನ್ಫಾಲೋ ಮಾಡಿದ್ದರು. ಆದರೂ ಸುದೀಪ್ ಸ್ನೇಹಿತ ಸಾರಥಿಯನ್ನು ಹಿಂಬಾಲಿಸುತ್ತಿದ್ದರು.